ಮಡಿಕೇರಿ, ಸೆ. 4: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ/ ಅತಿವೃಷ್ಟಿಯಿಂದ ತೊಂದರೆ ಗೊಳಗಾದ ಸಂತ್ರಸ್ತರು ಇರುವ ಪರಿಹಾರ ಕೇಂದ್ರಗಳು ಹಾಗೂ ಗ್ರಾಮಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆರೋಗ್ಯ ಸೇವಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಶ್ ತಿಳಿಸಿದ್ದಾರೆ.

ಅತಿವೃಷ್ಟಿಯಿಂದಾಗಿ ಆಗಸ್ಟ್ 17 ರಿಂದ ಜಿಲ್ಲೆಯಲ್ಲಿ ಪ್ರಾರಂಭಿಸಲಾದ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿ ಪರಿಹಾರ ಕೇಂದ್ರಕ್ಕೆ ವೈದ್ಯರು, ಶುಶ್ರೂಷಕರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಿ ವೈದ್ಯಕೀಯ ಸೇವೆ ನೀಡಲಾಗುತ್ತಿದೆ ಎಂದು ಡಾ.ರಾಜೇಶ್ ಅವರು ಮಾಹಿತಿ ನೀಡಿದ್ದಾರೆ.

ಇದರೊಂದಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಹಾಗೂ ತಾಯಿ ಮತ್ತು ಮಕ್ಕಳ ಆರೋಗ್ಯ, ವೈಯುಕ್ತಿಕ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಗುಣಮಟ್ಟದ ಆಹಾರ, ಪರಿಸರ ನೈರ್ಮಲ್ಯ ಕುರಿತಂತೆ ಗುಂಪು ಸಭೆ, ವಸ್ತು ಪ್ರದರ್ಶನ, ವಿಡಿಯೋ ಪ್ರದರ್ಶನ, ಬಿತ್ತಿಪತ್ರಗಳ ಪ್ರದರ್ಶನ, ಕರಪತ್ರಗಳ ಹಂಚಿಕೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ಸಹ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿದ್ದು, ಅವರ ಮಾರ್ಗದರ್ಶನದಂತೆ ಪರಿಹಾರ ಕೇಂದ್ರಗಳು ಮತ್ತು ಅತಿವೃಷ್ಟಿ ಪ್ರದೇಶಗಳಲ್ಲಿ ವೈದ್ಯರು ಮತ್ತು ಶುಶ್ರೂಷಕರನ್ನು ನಿಯೋಜಿಸಿ ಸಂತ್ರಸ್ತರಿಗೆ ಆರೋಗ್ಯ ತಪಾಸಣೆ, ಮನೋಸ್ಥೈರ್ಯ ಕಾರ್ಯಕ್ರಮಗಳು ಮತ್ತಿತರವನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೊಡಗು ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ 24*7 ಉಚಿತ ಆರೋಗ್ಯ ಸಹಾಯವಾಣಿ 08272-220606 ಯ ತಾತ್ಕಾಲಿಕ ಘಟಕವನ್ನು ತೆರೆಯಲಾಗಿದ್ದು, ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಈ ದೂರವಾಣಿ ಸಂಖ್ಯೆಗೆ ಉಚಿತ ಕರೆಮಾಡಿ ತಕ್ಷಣ ಆರೋಗ್ಯ ಸೇವೆಗಳನ್ನು ಪಡೆಯಬಹುದಾಗಿದೆ. ಸಾರ್ವಜನಿಕರಿಗೆ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಸಹಾಯ ಪಡೆಯಲು ಸಹಾಯವಾಣಿ ಕೇಂದ್ರವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದೆ.

ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆ: ಜಿಲ್ಲೆಯಲ್ಲಿನ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಯವರನ್ನು ನಿಯೋಜಿಸಿ ವಾಹನಗಳು ಹಾಗೂ ಆಂಬುಲೆನ್ಸ್‍ಗಳು ಸಕಾಲದಲ್ಲಿ ಸೇವೆಗೆ ದೊರೆಯುವಂತೆ ವ್ಯವಸ್ಥೆಗೊಳಿಸಿ ಕ್ರಮ ಕೈಗೊಳ್ಳಲಾಗಿದೆ. ಸ್ಥಾಪಿಸಿರುವ ಎಲ್ಲಾ ಪರಿಹಾರ ಕೇಂದ್ರಗಳಲ್ಲಿ ಚಿಕಿತ್ಸಾಲಯಗಳನ್ನು ತೆರೆದು ಎಲ್ಲಾ ಔಷಧೋಪಚಾರಗಳು ಲಭ್ಯವಿರುವಂತೆ ವ್ಯವಸ್ಥೆಗೊಳಿಸಿ ವಾರದ ಎಲ್ಲಾ ದಿನಗಳಲ್ಲಿ ದಿನದ 24 ಗಂಟೆಯೂ ಉಚಿತವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಡಾ.ರಾಜೇಶ್ ಅವರು ತಿಳಿಸಿದ್ದಾರೆ.

10 ಸಂಚಾರಿ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಿದ್ದು, ಹಾನಿಗೊಳಗಾದ ಗ್ರಾಮಗಳಿಗೆ ಭೇಟಿ ನೀಡಿ, ಸ್ಥಳದಲ್ಲಿಯೇ ಚಿಕಿತ್ಸೆ ನೀಡುವದರ ಜೊತೆಗೆ ಆರೋಗ್ಯ ಶಿಕ್ಷಣ ನೀಡುತ್ತಿದ್ದಾರೆ. ಸುಮಾರು 300 ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳು ಸ್ವÀಯಂ ಪ್ರೇರಿತರಾಗಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಸಾಂಕ್ರಾಮಿಕ ರೋಗಗಳ ನಿಯಂತ್ರಣ: ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಉಂಟಾಗಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಸಲುವಾಗಿ ಹಿರಿಯ ಪುರುಷ ಆರೋಗ್ಯ ಸಹಾಯಕರು, ಕಿರಿಯ ಪುರುಷ ಆರೋಗ್ಯ ಸಹಾಯಕರುಗಳನ್ನು ಒಳಗೊಂಡಂತೆ ನಾಲ್ಕು ತಂಡಗಳನ್ನು ರಚಿಸಿ ಜಿಲ್ಲೆಯಾದ್ಯಂತ ಪ್ರವಾಹ ಹಾಗೂ ಭೂ ಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಜನರಿಗೆ ಸೂಕ್ತ ಚಿಕಿತ್ಸೆ ನೀಡುವದರ ಜೊತೆಗೆ, ತೆರೆದ ಬಾವಿಯ ಪರಿಶೀಲನೆ, ಕುಡಿಯುವ ನೀರಿನ ಪರೀಕ್ಷೆ, ಓವರ್ ಹೆಡ್ ಟ್ಯಾಂಕ್ ಶುಚಿಗೊಳಿಸಿ, ಕ್ಲೋರಿನೇಷನ್ ಮಾಡಿಸುವದು, ಲಾರ್ವಾ ಸಮೀಕ್ಷೆ ನಡೆಸಿ ಸೊಳ್ಳೆಗಳ ಮೂಲೋಚ್ಚಾಟನೆ ಮಾಡಿಸುವದು, ಅಶುಚಿತ್ವ ಇರುವ ಸ್ಥಳಗಳಲ್ಲಿ ಬ್ಲೀಚಿಂಗ್ ಪೌಡರ್ ಹಾಕಿಸುವ ಕಾರ್ಯಗಳು ತೀವ್ರಗತಿಯಲ್ಲಿ ನಡೆಯುತ್ತಿವೆ. ಹಾಗೆಯೇ ಎನ್.ಸಿ.ಡಿ. ತಂಡವು ಪ್ರತಿಯೊಂದು ಪರಿಹಾರ ಕೇಂದ್ರದಲ್ಲಿ ಹಾಜರಿದ್ದು, ಪರಿಹಾರ ಕೇಂದ್ರದಲ್ಲಿರುವ ಎಲ್ಲರಿಗೂ ರಕ್ತ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ ಮತ್ತು ಮಧುಮೇಹ ಪರೀಕ್ಷೆ ನಡೆಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.

ಮಾನಸಿಕ ಆರೋಗ್ಯ ಕಾರ್ಯಕ್ರಮ: ಇಲಾಖೆಯ ವತಿಯಿಂದ ಮನೋ ವೈದ್ಯರ ತಂಡಗಳು ಜಿಲ್ಲೆಯ ಎಲ್ಲಾ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಆಪ್ತ ಸಮಾಲೋಚನೆ ನಡೆಸುವ ಮೂಲಕ ಸಂತ್ರಸ್ತರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ.

ಮಾಹಿತಿ ಶಿಕ್ಷಣ ಮತ್ತು ಸಂಪರ್ಕ ಕಾರ್ಯಕ್ರಮ: ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಹಾಗೂ ತಾಯಿ ಮತ್ತು ಮಕ್ಕಳ ಆರೋಗ್ಯ, ವೈಯುಕ್ತಿಕ ಸ್ವಚ್ಚತೆ, ಶುದ್ಧ ಕುಡಿಯುವ ನೀರು, ಗುಣಮಟ್ಟದ ಆಹಾರ, ಪರಿಸರ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಕಿರುಚಿತ್ರ ಪ್ರದರ್ಶನ, ಗುಂಪು ಸಭೆಗಳು, ನಾಟಕಗಳು, ವಸ್ತು ಪ್ರದರ್ಶನ, ಬಿತ್ತಿಪತ್ರಗಳು, ಉಪನ್ಯಾಸಗಳ ಮೂಲಕ ಸಂತ್ರಸ್ತರಿಗೆ ಮಾಹಿತಿ ನೀಡುವ ಸಲುವಾಗಿ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಂದ ಆರೋಗ್ಯ ಶಿಕ್ಷಣಾಧಿಕಾರಿಗಳ ತಂಡ ನಿಯೋಜಿಸಲಾಗಿದೆ.

ಈ ತಂಡವು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಕಿರುಚಿತ್ರ ಪ್ರದರ್ಶನ, ಗುಂಪು ಸಭೆ, ಉಪನ್ಯಾಸ, ಚರ್ಚೆ ಮೂಲಕ ವಿದ್ಯಾರ್ಥಿಗಳಿಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಅರಿವು ಮೂಡಿಸುತ್ತಿದ್ದಾರೆ. ಆಕಾಶವಾಣಿ ಮುಖಾಂತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಜ್ಞರ ಸಹಯೋಗದೊಂದಿಗೆ ಪ್ರತಿ ನಿತ್ಯ ಆರೋಗ್ಯ ಸಮಸ್ಯೆಗಳ ವಿಷಯಕ್ಕೆ ಸಂಬಂಧಿಸಿದಂತೆ ರೇಡಿಯೋ ಸಂವಾದ ಏರ್ಪಡಿಸಲಾಗಿದ್ದು, ಈ ಸಂವಾದಗಳನ್ನು ಪ್ರತಿನಿತ್ಯ ರೇಡಿಯೋ ವಾಹಿನಿಗಳಲ್ಲಿ ಬಿತ್ತರಗೊಳ್ಳುತ್ತಿದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಪ್ರವಾಹ ಪರಿಸ್ಥಿತಿಯಲ್ಲಿ ಹಾವು ಮತ್ತು ಕ್ರಿಮಿಕೀಟಗಳ ಕಚ್ಚುವಿಕೆಯಿಂದ ರಕ್ಷಣೆ, ಸೊಳ್ಳೆ ನಿಯಂತ್ರಣಕ್ಕೆ ಸರಳ ವಿಧಾನಗಳು, ನೀರು ಮತ್ತು ಆಹಾರದಿಂದ ಹರಡುವ ಸಾಂಕ್ರಾಮಿಕ ರೋಗಗಳು ಮುಂತಾದವುಗಳ ಕುರಿತಾಗಿ ವಿವಿಧ ಬಗೆಯ ಕರಪತ್ರ ಮುದ್ರಿಸಿ ಪರಿಹಾರ ಕೇಂದ್ರಗಳು ಹಾಗೂ ಎಲ್ಲಾ ಸಾರ್ವಜನಿಕರಿಗೆ ವಿತರಿಸುವ ಮೂಲಕ ಅರಿವು ಮೂಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಮಾಹಿತಿ ನೀಡಿದ್ದಾರೆ.