ಸೋಮವಾರಪೇಟೆ, ಸೆ. 4: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ ವತಿಯಿಂದ ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ತಾಲೂಕುಮಟ್ಟದ ವಿಜ್ಞಾನ ವಿಚಾರಗೋಷ್ಠಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆ ನಡೆಯಿತು.
ತಾಲೂಕಿನ ವಿವಿಧ ಪ್ರೌಢಶಾಲೆಗಳಿಂದ ಆಗಮಿಸಿದ್ದ ಶಾಲಾ ತಂಡಗಳು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಪ್ರದರ್ಶಿಸಿದ ನಾಟಕಗಳು ಗಮನ ಸೆಳೆಯಿತು. ಪರಿಸರ ಕಾಳಜಿ, ಪರಿಸರದ ಮೇಲಾಗುತ್ತಿರುವ ದಬ್ಬಾಳಿಕೆ, ಅರಣ್ಯ ಮತ್ತು ಪರಿಸರ ನಾಶದಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳು ಅಭಿನಯಿಸಿದ ನಾಟಕಗಳು ಮನೋಜ್ಞವಾಗಿದ್ದವು.
ಪರಿಸರವನ್ನು ಸಂರಕ್ಷಿಸದೆ ಇದ್ದಲ್ಲಿ ಎದುರಿಸಬೇಕಾದ ಅನಾಹುತಗಳ ಬಗ್ಗೆ ವಿದ್ಯಾರ್ಥಿಗಳು ನಾಟಕದ ಮೂಲಕ ಜಾಗೃತಿ ಮೂಡಿಸಿದರು. ಮಲೆನಾಡು, ಕರಾವಳಿ ಸೇರಿದಂತೆ ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಮಹಾ ಮಳೆ ಉಂಟಾದ ಸಂದರ್ಭ ನಡೆದ ಭೂ ಕುಸಿತ, ನದಿ ಪ್ರವಾಹ, ಅತಿವೃಷ್ಟಿ, ಅನಾವೃಷ್ಟಿ, ನೆರೆಹಾವಳಿ ಮುಂತಾದ ಪ್ರಕೃತಿ ವಿಕೋಪಗಳಿಗೆ ಪರಿಸರ ನಾಶ, ಬೆಟ್ಟ ಪ್ರದೇಶಗಳಲ್ಲಿ ಕೆರೆ ಮತ್ತು ಕಟ್ಟಡಗಳ ನಿರ್ಮಾಣವೇ ಕಾರಣ ಎಂದು ವಿದ್ಯಾರ್ಥಿಗಳು ಅಭಿನಯದ ಮೂಲಕ ಪ್ರದರ್ಶಿಸಿದರು.
ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಅರಿವು ಮೂಡಿಸಲು ವಿಜ್ಞಾನ ನಾಟಕ ಸಹಕಾರಿ. ಸಮಾಜದಲ್ಲಿರುವ ಮೌಢ್ಯ ಮತ್ತು ಕಂದಾಚಾರದ ವಿರುದ್ಧ ವಿದ್ಯಾರ್ಥಿಗಳು ಅರಿವು ಮೂಡಿಸುವ ಪ್ರಯತ್ನಕ್ಕೆ ಮುಂದಾಗಬೇಕೆಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪರಿಸರ ಮಿತ್ರ ಪ್ರಶಸ್ತಿ ವಿಜೇತ ಶಾಲಾ ಶಿಕ್ಷಕ ಪ್ರೇಮ್ ಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಭಾರ ಉಪ ಪ್ರಾಂಶುಪಾಲ ತಳವಾರ್, ಇಸಿಒ ಶೇಖರ್, ಮೂರ್ತಿ, ಸಿಆರ್‍ಪಿ ಜವರಯ್ಯ ಉಪಸ್ಥಿತರಿದ್ದರು.