ಕುಶಾಲನಗರ, ಸೆ. 4: ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಬಹುತೇಕ ಮಂದಿ ಕುಶಾಲನಗರದ ಸಾಂತ್ವನ ಕೇಂದ್ರದಲ್ಲಿ ನೆಮ್ಮದಿಯ ನೆಲೆ ಕಾಣುತ್ತಿದ್ದಾರೆ. ಪ್ರಾರಂಭದಲ್ಲಿ ಸ್ವಲ್ಪ ಗೊಂದಲ ವಾದರೂ ಮೂರನೇ ದಿನದಿಂದ ಬಹುತೇಕ ಸಂತ್ರಸ್ತರು ಜಿಲ್ಲಾಡಳಿತ ಕಲ್ಪಿಸಿರುವ ಪರಿಹಾರ ಕೇಂದ್ರದಲ್ಲಿ ತಮ್ಮ ದುಗುಡಗಳ ನಡುವೆ ದಿನದೂಡು ತ್ತಿರುವ ದೃಶ್ಯ ಕಂಡುಬಂದಿದೆ. ಪ್ರಸಕ್ತ ಕುಶಾಲನಗರದ ಹಾರಂಗಿ ರಸ್ತೆಯ ವಾಲ್ಮೀಕಿ ಭವನದ ಆವರಣದಲ್ಲಿ ಡಾ ಅಂಬೇಡ್ಕರ್ ಸಮುದಾಯ ಭವನ, ವಿದ್ಯಾರ್ಥಿ ನಿಲಯಗಳಲ್ಲಿ ಒಟ್ಟು 392 ಸಂತ್ರಸ್ತರು ಆಶ್ರಯ ಪಡೆದಿದ್ದು ದಿನದ 24 ಗಂಟೆ ಕಾಲ ಸಂತ್ರಸ್ತರ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕಾಳಜಿ ವಹಿಸುತ್ತಿದ್ದಾರೆ.

ಕೇಂದ್ರದಲ್ಲಿ ಸಂತ್ರಸ್ತರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವದರೊಂದಿಗೆ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಿಬಿರದ ಉಸ್ತುವಾರಿ ಅಧಿಕಾರಿಗಳಾದ ಉಪವಿಭಾಗಾಧಿಕಾರಿ ಬಿನಾಯ್ ಮಾಹಿತಿ ನೀಡಿದ್ದಾರೆ.

‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಶಿಬಿರದಲ್ಲಿ 16 ಮಂದಿ ಅಡುಗೆ ಕೆಲಸದವರಿದ್ದು, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸೇರಿದಂತೆ ಆರೋಗ್ಯ ಇಲಾಖೆ, ಕುಶಾಲನಗರ ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ನಿರಂತರ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಕೇಂದ್ರದಲ್ಲಿ ವಿಶೇಷ ತಹಶೀಲ್ದಾರ್ ದುಂಡಪ್ಪ ಅವರನ್ನು ನಿಯೋಜಿಸಲಾಗಿದೆ. ಶಿಬಿರದ ನೋಡಲ್ ಅಧಿಕಾರಿಯಾಗಿ ಉಪನ್ಯಾಸಕ ಫಿಲಿಪ್‍ವಾಸ್ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಂತ್ರಸ್ತರಿಗೆ ಶಿಬಿರದಲ್ಲಿ ಒಟ್ಟು 31 ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಶುದ್ಧ ಕುಡಿವ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಡುಗೆ ಮನೆ ಸೇರಿದಂತೆ ಎಲ್ಲೆಡೆ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಲಾಗಿದೆ ಎಂದಿದ್ದಾರೆ. ಮಕ್ಕಂದೂರಿನಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಾದ ಪ್ರಕಾಶ್ ಎಂಬವರು ತನ್ನ ಪತ್ನಿಯೊಂದಿಗೆ ಶಿಬಿರದಲ್ಲಿ ಆಶ್ರಯ ಪಡೆದಿದ್ದರೂ ಪ್ರಕಾಶ್ ಮಾತ್ರ ಶಿಬಿರದಲ್ಲಿ ಅಡುಗೆ ಮನೆಯಲ್ಲಿ ಕೆಲಸ ನಿರ್ವಹಿಸುವದರೊಂದಿಗೆ ಅಡುಗೆಯವರಿಗೆ ಸಹಕಾರ ನೀಡುತ್ತಿದ್ದ ದೃಶ್ಯ ಕಂಡುಬಂತು.

ಶಿಬಿರದಲ್ಲಿರುವ ಸಂತ್ರಸ್ತರಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಪ್ರತಿ ದಿನ ಮಕ್ಕಳಿಗೆ ನೂಡಲ್ಸ್, ಬಿಸಿ ಹಾಲು, ಮ್ಯಾಗಿ ಮತ್ತಿತರ ಆಹಾರ ನೀಡಲಾಗುತ್ತಿದ್ದು ಉಳಿದಂತೆ ಅನ್ನ ಸಾಂಬಾರ್, ಪಲಾವ್, ಬಾತ್, ಬಿಸ್ಕೆಟ್ ಒದಗಿಸಲಾಗುತ್ತಿದೆ ಎಂದು ನೋಡಲ್ ಅಧಿಕಾರಿ ಫಿಲಿಪ್‍ವಾಸ್ ತಿಳಿಸಿದ್ದಾರೆ. ಒಟ್ಟು 49 ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲಾಗುತ್ತಿದ್ದು ಅವರಲ್ಲಿ 28 ಮಕ್ಕಳನ್ನು ಸ್ಥಳೀಯ ಕ್ರೈಸ್ಟ್ ಶಾಲೆ, ಮೂಕಾಂಬಿಕ ಶಾಲೆಯಲ್ಲಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಿಕ್ಷಣ ಇಲಾಖೆಯಿಂದ 6 ಜನ ಶಿಕ್ಷಕರನ್ನು ನಿಯೋಜಿಸಲಾಗಿದೆ.

ಉಳಿದಂತೆ ಕೆಲವು ಮಕ್ಕಳನ್ನು ಡಯಟ್ ಪ್ರಾಂಶುಪಾಲರ ಶಿಫಾರಸಿನ ಮೇರೆಗೆ ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯ ವಸತಿ ನಿಲಯದ ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸಿ ಕೊಡಲಾಗಿದೆ. ಸಾಂತ್ವನ ಕೇಂದ್ರದಲ್ಲಿ ಮಹಿಳೆಯರು ಆವರಣದಲ್ಲಿರುವ ಬೃಹತ್ ಬಂಡೆಗಳನ್ನು ಬಳಸಿಕೊಂಡು ಬಟ್ಟೆ-ಬರೆಗಳನ್ನು ಶುಚಿಗೊಳಿಸುತ್ತಿರುವ ದೃಶ್ಯ ಗೋಚರಿಸಿತು.

ಸಿಬ್ಬಂದಿಗಳು ಸೇರಿದಂತೆ ಅಂದಾಜು 500 ಕ್ಕೂ ಅಧಿಕ ಮಂದಿಗೆ ಅವಶ್ಯಕತೆಯಿರುವ ನೀರಿನ ಕೊರತೆ ನೀಗಿಸಲು ಸಮೀಪದ ಖಾಸಗಿ ವ್ಯಕ್ತಿಯೊಬ್ಬರ ಮನೆ ಹಾಗೂ ಸಮೀಪದ ಪ್ರಥಮ ದರ್ಜೆ ಕಾಲೇಜಿನಿಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ಈ ನಡುವೆ ಕಳೆದ 15 ದಿನಗಳಿಂದ ನಿರಂತರವಾಗಿ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಅಧಿಕಾರಿ ಸಿಬ್ಬಂದಿಗಳು ಅನಾರೋಗ್ಯಕ್ಕೆ ಒಳಗಾಗಿದ್ದು ಆಸ್ಪತ್ರೆಗೆ ದಾಖಲಾಗಿರುವ ವರದಿಗಳು ಲಭ್ಯವಾಗಿವೆ. ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿಗಳು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

- ಚಂದ್ರಮೋಹನ್