ಶನಿವಾರಸಂತೆ, ಸೆ. 6: ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷೆ ಕೆ.ಎನ್. ನಿರ್ಮಲ ಸುಂದರ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆ ಪ್ರಾರಂಭವಾಗುವ ಮೊದಲು ಅಧ್ಯಕ್ಷೆ ನಿರ್ಮಲ ಸುಂದರ್ ಹಾಗೂ ಉಪಾಧ್ಯಕ್ಷ ಬಿ.ಎ. ಅಹಮ್ಮದ್ ಅವರುಗಳ ವಿರುದ್ಧ ಸದಸ್ಯರುಗಳು ಹರಿಹಾಯ್ದರು. ಜುಲೈ 6 ರಂದು ಬಸವ ಯೋಜನೆ ಅಡಿಯಲ್ಲಿ ಮಂಜೂರಾದ 36 ಮನೆಗಳನ್ನು ಫಲಾನುಭವಿಗಳಿಗೆ ನೀಡಲು ತಲಾ ಒಂದು ಮನೆಗೆ ರೂ. 15 ಸಾವಿರ ನೀಡಬೇಕು, ಇಲ್ಲದಿದ್ದರೆ ನಿಮಗೆ ಮನೆ ಕೊಡಲು ಬರುವದಿಲ್ಲ ಎಂದು ಫಲಾನುಭವಿಗಳಿಗೆ ದಮುಕಿ ಹಾಕಿ ಮನೆ ನೀಡುವ ವಿಚಾರದಲ್ಲಿ ಕಮಿಷನ್ ಪಡೆಯುವಾಗ ಎಸಿಬಿ ಬಲೆಗೆ ಬಿದ್ದು ಜೈಲುವಾಸ ಅನುಭವಿಸಿದ್ದು, ತಮ್ಮ ಹುದ್ದೆಗೆ ರಾಜೀನಾಮೆ ಕೊಡದೆ ಉದ್ದಟತನದಿಂದ ಪುನಃ ಸಾಮಾನ್ಯ ಸಭೆ ಕರೆದಿರುವಿರಿ, ನಿಮಗೆ ಯಾವ ನೈತಿಕತೆ ಇದೆ ಎಂದು ಪಂಚಾಯಿತಿ ಸದಸ್ಯರುಗಳಾದ ಬಿ.ಕೆ. ದಿನೇಶ್, ರೇಣುಕಾ ಮೇದಪ್ಪ, ಹೇಮ ಈರಪ್ಪ, ಸಾವಿತ್ರಿ ಕುಮಾರಸ್ವಾಮಿ ಹಾಗೂ ಕೇಶವ ಪ್ರಶ್ನಿಸಿದರು.
ಅಧ್ಯಕ್ಷರು, ಉಪಾಧ್ಯಕ್ಷರು ಈ ವಿಚಾರ ನ್ಯಾಯಾಲಯದಲ್ಲಿದೆ. ನಾವು ಅಪರಾಧಿಗಳಲ್ಲ ಎಂದರು. ಈ ಬಗ್ಗೆ ಅರ್ಧ ಗಂಟೆಗಳ ಕಾಲ ಮಾತಿನ ಚಕಮಕಿ ನಡೆದು ಐದು ಮಂದಿ ಸದಸ್ಯರುಗಳು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಸಭೆಯಿಂದ ಹೊರ ನಡೆದರು. 9 ಮಂದಿ ಸದಸ್ಯರನ್ನು ಒಳಗೊಂಡ ಗ್ರಾ.ಪಂ. ಕೋರಂ ಇಲ್ಲದೆ ಸಭೆ ನಿಂತು ಹೋಗಿ, ಅಧ್ಯಕ್ಷರ ಒಪ್ಪಿಗೆಯಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಸಾಮಾನ್ಯ ಸಭೆಯನ್ನು ಮುಂದೂಡಿದರು.
ಸಭೆಯನ್ನು ಬಹಿಷ್ಕರಿಸಿ ಹೊರಗಡೆ ಬಂದ ಸದಸ್ಯರುಗಳು ಮಾತನಾಡುತ್ತಾ, ಇವರುಗಳು ಸದಸ್ಯರುಗಳಾದ ನಾವು ಎಷ್ಟೆ ಮನವಿ ಮಾಡಿದರು ಶೇ. 25 ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಿದ್ಯಾಭ್ಯಾಸ, ಸಹಾಯಧನ, ಪರಿಕರ ವಿತರಿಸುವಲ್ಲಿ ಆಸಕ್ತಿ ತೋರುವದಿಲ್ಲ. ಪಂಚಾಯಿತಿಯಲ್ಲಿ ನ್ಯಾಯ ಸಮಿತಿ, ಉತ್ಪಾದನ ಸಮಿತಿ, ಇತರ ಮುಖ್ಯ ಸಮಿತಿಗಳ ಸಭೆಗಳನ್ನೇ ಕರೆದಿರುವದಿಲ್ಲ. ಬೀದಿ ದೀಪಗಳನ್ನು ಹಾಕಿಸುವ ವ್ಯವಸ್ಥೆಯನ್ನೇ ಮಾಡಿರುವದಿಲ್ಲ. ಇವರುಗಳು ಇತರ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷವಾಗಿ ವರ್ತಿಸುವದು ಖಂಡನೀಯ. ಇವರಿಗೆ ಆಡಳಿತ ನಡೆಸಲಾಗದಿದ್ದರೆ ರಾಜಿನಾಮೆ ಕೊಟ್ಟು ಮನೆಗೆ ಹೋಗಲಿ, ಆಡಳಿತ ಹೇಗೆ ನಡೆಸುವದು ಎಂದು ನಾವು ತೋರಿಸಿಕೊಡುತ್ತೇವೆ ಎಂದು ಪತ್ರಿಕೆಗೆ ಹೇಳಿಕೆ ನೀಡಿದರು.