ಮಡಿಕೇರಿ, ಸೆ. 6: ಎತ್ತ ನೋಡಿದರತ್ತ ನಿತ್ಯ ಹರಿದ್ವರ್ಣದ ಬೆಟ್ಟಗಳ ಸಾಲು, ತಳಭಾಗದಲ್ಲಿ ಗದ್ದೆ, ನದಿ, ತೊರೆಗಳ ಸೊಬಗು, ಅಲ್ಲಲ್ಲಿ ಚಂದದ ಮನೆಗಳು, ಚಳಿಗಾಲದಲ್ಲಿ ಮಂಜು ಕವಿದಾಗ ಹಾಲ್ಮೊರೆಯುಕ್ಕಿಹರಿಯುತ್ತಿರುವಂತೆ ಕಣ್ಣಳತೆಗೂ ಸಿಗದ ವಿಹಂಗಮ ನೋಟ, ಕಾಡು ಮರಗಳೇ ತುಂಬಿರುವ ಕಾನನದಲ್ಲಿ ಪ್ರಾಣಿ - ಪಕ್ಷಿಗಳ ಇಂಚರ, ಮನೆಯಂಗಳದಲ್ಲಿ ಬೊಗಳುವ ನಾಯಿಗಳು, ಮುಂಜಾನೆಯಿಂದ ಮುಸ್ಸಂಜೆವರೆಗೂ ಕೂಗುವ ಕೋಳಿಗಳು, ದೂರದಲ್ಲೆಲ್ಲೋ ಮೇಯುತ್ತಿದ್ದ ಹಸುಗಳ ಅಂಬಾ... ಎಂಬ ಅಕ್ಕರೆಯ ಕೂಗು, ಸಂಜೆಯಾಗುತ್ತಲೇ ಒಟ್ಟು ಸೇರುವ ಯುವಕರ - ಮಹಿಳೆಯರ ಮಾತಿನ ಅಬ್ಬರ, ಹಬ್ಬ - ಹರಿದಿನದಂದು ಎಲ್ಲರೂ ಒಂದುಗೂಡುವ ಸಂಭ್ರಮ...
ಇದು ನಮಗೆ ಸ್ವಾತಂತ್ರ್ಯ ಸಿಕ್ಕಿದ ಆಗಸ್ಟ್ 15ರವರೆಗಿನ ಮಕ್ಕಂದೂರು, ಹೆಮ್ಮೆತ್ತಾಳು, ಮುಕ್ಕೋಡ್ಲು, ಮೇಘತ್ತಾಳು, ಉದಯಗಿರಿ ಗ್ರಾಮಗಳ ಸುಂದರ ಚಿತ್ರಣ. ಈಗ ಇಲ್ಲಿ ಇದ್ಯಾವದೂ ಇಲ್ಲ, ಬೆಟ್ಟಗಳ ಸಾಲಿಗೆ ಮಣ್ಣೆರಚಿದಂತಿದೆ, ನದಿ - ತೊರೆಗಳು ಪ್ರಪಾತಕ್ಕಿಳಿದಿವೆ, ಗದ್ದೆಗಳನ್ನು ಮಣ್ಣಿನ ರಾಶಿ ನುಂಗಿ ಹಾಕಿದೆ, ಮನೆಗಳು ನೆಲದಡಿಗೆ ಸೇರಿವೆ, ಕಾಡು ಮರಗಳು ಉರುಳಿ ಟಿಂಬರ್ ಡಿಪೋದಲ್ಲಿ ಸಂಗ್ರಹವಾದಂತಿವೆ, ನಾಯಿಗಳ ಬೊಗಳುವಿಕೆಯಿಲ್ಲ, ಕೋಳಿ ಕೂಗುತ್ತಿಲ್ಲ, ಪಕ್ಷಿಗಳ ಇಂಚರ ಕೇಳಿಸುತ್ತಿಲ್ಲ. 20 ದಿನಗಳ ಹಿಂದೆ ಭೋರ್ಗರೆಯುತ್ತಿದ್ದ ಮಳೆಯೊಂದಿಗಿದ್ದ ಪ್ರಕೃತಿಯ ಕೊಡುಗೆಯಾಗಿರುವ ಗಾಳಿಯೂ ಸದ್ದು ಮಾಡುತ್ತಿಲ್ಲ. ಎಲ್ಲೆಲ್ಲೂ ನೀರವ ಮೌನ. ಮಣ್ಣಿನಡಿ ಸಿಲುಕಿ ಸತ್ತಿರುವ ಪ್ರಾಣಿಗಳ ವಾಸನೆ ಬೀರುತ್ತಿರುವ ಪ್ರದೇಶದಲ್ಲಿ ಮಸಣದಲ್ಲಿ ಹೆಣ ಸುಟ್ಟ ನಂತರ ಅಳಿದುಳಿದ ಎಲುಬುಗಳನ್ನು ಹುಡುಕಿ ಮತ್ತೆ ಸುಡುವಂತೆ ಕಣ್ಣೀರಿನೊಂದಿಗೆ ಮಣ್ಣಿನಡಿ ಹುದುಗಿ ಹೋಗಿರುವ ವಸ್ತುಗಳನ್ನು ಹುಡುಕುವ ಕಾಯಕವಾಗುತ್ತಿದೆ.
ಹತ್ತು ಮನೆಗಳು ಧ್ವಂಸ
ಭಾರೀ ಭೂಕುಸಿತದೊಂದಿಗೆ ತಾಯಿ - ಮಗ ಜೊತೆಯಲ್ಲೇ ಭೂಸಮಾಧಿಯಾದ ಹೆಮ್ಮೆತ್ತಾಳು ಗ್ರಾಮದಲ್ಲಿ ಒಂದೇ ಕಡೆಯಲ್ಲಿದ್ದ 10 ಕುಟುಂಬಗಳ ಮನೆಗಳು ನಾಶವಾಗಿವೆ, ಹುಡುಕಿದರೂ ಮನೆಗಳಿದ್ದ ಜಾಗ ಗುರುತಿಸಲಾಗುತ್ತಿಲ್ಲ, ಮನೆಗಳಲ್ಲಿದ್ದ ವಸ್ತುಗಳಾವದೂ ಗೋಚರಿಸುತ್ತಿಲ್ಲ. ಸೇವಾ ಭಾರತಿ, ಆರ್ಎಸ್ಎಸ್ ಕಾರ್ಯಕರ್ತರು, ಸ್ಥಳೀಯ ಯುವಕರು, ಗ್ರಾ.ಪಂ. ಸದಸ್ಯರುಗಳು ಸೇರಿಕೊಂಡು ಹುಡುಕಾಟ ನಡೆಸುತ್ತಿದ್ದರಾದರೂ ಎರಡು ಸಿಲಿಂಡರ್, ಮಗುವಿನ ಒಂದು ಜೊತೆ ವಾಲೆ ಮಾತ್ರ ಸಿಕ್ಕಿದೆ.
ದಾರಿಯಿಲ್ಲ
ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಹಾನಿಯುಂಟಾಗಿದ್ದು, ಕೆಲವೊಂದು ಮನೆಗಳು, ಜಾಗಗಳಿಗೆ ಹಾನಿಯಾಗದೇ ಹಾಗೇ ಉಳಿದಿವೆ. ಆದರೆ ಎಲ್ಲಿಗೂ ತೆರಳಲು ರಸ್ತೆಗಳೇ ಇಲ್ಲವಾಗಿದೆ. ಹೆಮ್ಮೆತ್ತಾಳು ಗ್ರಾಮದ ರಸ್ತೆ ಮಾತ್ರ ಬಾಕಿ ಉಳಿದಿದ್ದು, ಇದೀಗ ಸುತ್ತಲಿನ ಗ್ರಾಮದವರು ಇದೇ ರಸ್ತೆಯನ್ನು ಅವಲಂಭಿಸುವಂತಾಗಿದೆ. ಉಳಿದಿರುವ ತಮ್ಮ ಮನೆಗಳಿಗೆ ಕಾಡು - ಮೇಡಿನಲ್ಲಿ ಅಲೆದು ಮನೆಯನ್ನು ಸ್ವಚ್ಛ ಮಾಡಿ ಮತ್ತೆ ಇದೀಗ ತಂಗಿರುವೆಡೆಗೆ ಮರಳುತ್ತಿರುವದು ಸಾಮಾನ್ಯವಾಗಿದೆ.
ನೀರೆ ಇಲ್ಲ
ಗ್ರಾಮದಲ್ಲಿ ಉಳಿಕೆಯಾಗಿರುವ ಮನೆಗಳಲ್ಲಿ ತಂಗಬಹುದಾದರೂ ಕುಡಿಯಲು ನೀರಿನ ವ್ಯವಸ್ಥೆಯಿಲ್ಲ. ಗ್ರಾಮಗಳಲ್ಲಿದ್ದ ನೀರಿನ ಸೆಲೆಗಳು ಪ್ರಪಾತಕ್ಕಿಳಿದಿದ್ದು, ಕೆಲವು ಕಡೆ ಅದೃಶ್ಯವಾಗಿವೆ. ಅತ್ತ ಮನೆಗಳಲ್ಲಿ ತಂಗಲೂ ಆಗದೆ, ಇದ್ದ ಮನೆಯೊಳಗಿರುವ ಸಾಮಗ್ರಿಗಳನ್ನು ಹೊರತರಲಾಗದೇ ಪರಿತಪಿಸು ವಂತಾಗಿದೆ. ಅಳಿದುಳಿದ ಜಾಗವನ್ನು ನೋಡಿಕೊಂಡು ಕಣ್ಣೀರಿಡುವದೇ ಸಂತ್ರಸ್ತರ ನಿತ್ಯ ಕಾಯಕವಾಗಿದೆ.
- ಸಂತೋಷ್