ಮಡಿಕೇರಿ, ಸೆ. 6: ರಾಜ್ಯ ಸರಕಾರದ ಅಡಿಷನಲ್ ಅಡ್ವೋಕೇಟ್ ಜನರಲ್ ಕೊಡಗಿನ ಎ.ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಮಡಿಕೇರಿ ವಕೀಲರ ಸಂಘದಲ್ಲಿ ತಾ. 12 ರಂದು ವಿಶೇಷ ಸಭೆಯೊಂದನ್ನು ಏರ್ಪಡಿಸಲಾಗಿದೆ. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್, ಕಾರ್ಯದರ್ಶಿ ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ ಹಾಗೂ ಆಡಳಿತ ಸಮಿತಿಯ ಸದಸ್ಯರುಗಳು ವಕೀಲರುಗಳ ಕಲ್ಯಾಣ ನಿಧಿಯ ಕಾರ್ಯದರ್ಶಿ ಸತ್ಯನಾರಾಯಣ ಗುಪ್ತ ಅವರುಗಳು ಕೂಡ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯವಾಗಿ ಇತ್ತೀಚೆಗಿನ ಪ್ರಾಕೃತಿಕ ವಿಕೋಪ ಸಂದರ್ಭ ಕೊಡಗಿನಲ್ಲಿ ಸಂಭವಿಸಿದ ಅನಾಹುತಗಳ ಕುರಿತು ಚರ್ಚಿಸಲಾಗುವದು. ಅಲ್ಲದೇ ಬೆಂಗಳೂರು ವಕೀಲರ ಸಂಘಕ್ಕೆ ಅಲ್ಲಿನ ವಕೀಲರುಗಳು ಉದಾರವಾಗಿ ನೀಡಿರುವ ಹಣವನ್ನು ಕಲ್ಯಾಣ ನಿಧಿ ರೂಪದಲ್ಲಿ ಸ್ವೀಕರಿಸಿದ್ದು, ಈ ನಿಧಿಯ ಹಣವನ್ನು ಸಂತ್ರಸ್ತರಿಗೆ ನೆರವು ನೀಡಲು ಬಳಸಿಕೊಳ್ಳುವ ಬಗ್ಗೆ ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವದೆಂದು ತಿಳಿದು ಬಂದಿದೆ.

ಸಭೆಯ ಬಳಿಕ ವಕೀಲರ ತಂಡವು ಮಡಿಕೇರಿ ಮತ್ತು ಇನ್ನಿತರ ಕೆಲವು ಕಡೆ ಹಾನಿಗೀಡಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸುತ್ತದೆ. ನಂತರ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಮಾಧ್ಯಮದವರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಗುವದೆಂದು ಗೊತ್ತಾಗಿದೆ.