ಕುಶಾಲನಗರ, ಸೆ. 5: ಪ್ರಕೃತಿ ವಿಕೋಪದಿಂದ ವಸತಿಹೀನರಾದ ಸಂತ್ರಸ್ತರಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲೆಯಲ್ಲಿ 6 ಮನೆಗಳನ್ನು ನಿರ್ಮಿಸಿಕೊಡಲಾಗುವದು ಎಂದು ಕ.ರ.ವೇ. ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಹೇಳಿದರು.
ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಆಶ್ರಯ ಪಡೆದಿರುವ ಪ್ರಕೃತಿ ವಿಕೋಪದ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಬಳಿಕ ಮಾತನಾಡಿ, ದೇಶಕ್ಕೆ ವೀರ ಸೇನಾನಿಗಳನ್ನು ನೀಡಿದ ಕೊಡಗು ಜಿಲ್ಲೆಯ ವಿವಿಧೆಡೆ ಪ್ರಕೃತಿ ದುರಂತ ನಡೆದಿರುವದು ವಿಷಾದಕರ ಸಂಗತಿಯಾಗಿದೆ. ನಿರಂತರ ಮಳೆಯಿಂದ ಉಂಟಾದ ಜಲಪ್ರಳಯದಲ್ಲಿ ಸಂಕಷ್ಟಕ್ಕೆ ಹಾನಿಗೊಳಗಾದ ಸಂತ್ರಸ್ತರಿಗೆ ಸಹಕಾರ ನೀಡಲು ಕ.ರ.ವೇ. ಬದ್ದವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗುರುತಿಸುವ ಸ್ಥಳದಲ್ಲಿ ತಲಾ ರೂ. 5 ಲಕ್ಷ ವೆಚ್ಚದಲ್ಲಿ 6 ಮನೆಗಳನ್ನು ನಿರ್ಮಿಸಿಕೊಡಲು ವೇದಿಕೆ ನಿರ್ಧರಿಸಿದೆ ಎಂದರು.
ಈ ಸಂದರ್ಭ ಕ.ರ.ವೇ. ರಾಜ್ಯ ಉಪಾಧ್ಯಕ್ಷ ಅಂಜನ್ ಗೌಡ, ಸಹನ ಶೇಖರ್, ಪ್ರಧಾನ ಕಾರ್ಯದರ್ಶಿ ಸಣ್ಣೀರಪ್ಪ, ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ಕಾರ್ಯದರ್ಶಿ ಸತೀಶ್, ಕಾರ್ಮಿಕ ಘಟಕದ ಅಧ್ಯಕ್ಷ ಮಂಜು, ಕುಶಾಲನಗರ ನಗರ ಘಟಕದ ಅಧ್ಯಕ್ಷ ಹರ್ಷ, ವೇದಿಕೆ ಪದಾಧಿಕಾರಿಗಳು ಇದ್ದರು.