ಮಡಿಕೇರಿ, ಸೆ. 6: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲೂರು, ನಿಡುವಟ್ಟು, ಬೇರೆಬೆಳ್ಳಚ್ಚು ಗ್ರಾಮಗಳಲ್ಲಿ ಪ್ರಾಕೃತಿಕ ವಿಕೋಪ ದಿಂದ ಎಕರೆಗಟ್ಟಲೆ ಗದ್ದೆ ಬಯಲಿನಲ್ಲಿ ರಾಶಿ ರಾಶಿ ಮಣ್ಣು ತುಂಬಿ ಕೊಂಡಿರುವ ದೃಶ್ಯ ಒಂದೆಡೆಯಾದರೆ, ಈಗಾಗಲೇ ನಾಟಿ ಮಾಡಿರುವ ಗದ್ದೆ ಗಳಲ್ಲಿ ನೆಟ್ಟ ಪೈರಿಗೂ ನೀರಿಲ್ಲದಿರುವ ಕರುಣಾಜನಕ ದೃಶ್ಯ ಎದುರಾಗಿದೆ.
ಒಂದೊಮ್ಮೆ ತೀರಾ ಕುಗ್ರಾಮ ದೊಂದಿಗೆ ಯಾವದೇ ಮೂಲಭೂತ ಸೌಲಭ್ಯವಿಲ್ಲದೆ ತೀರಾ ಕಡೆಗಣಿ ಸಲ್ಪಟ್ಟಿದ್ದ ಗ್ರಾಮದಲ್ಲಿ ಕೆಲವು ವರ್ಷಗಳ ಹಿಂದೆ ಇದೇ ಮಳೆಗಾಲ ದಲ್ಲಿ ಇಬ್ಬರು ವ್ಯಕ್ತಿಗಳು ನೀರು ಪಾಲಾಗುವದರೊಂದಿಗೆ ಸುದ್ದಿ ಯಾಗಿತ್ತು. ಆ ಬಳಿಕ ನಕ್ಸಲರು ಕಾಣಿಸಿಕೊಂಡು ಮತ್ತೆ ರಾಜ್ಯ ಮಟ್ಟದಲ್ಲಿ ಹೆಸರು ಕೇಳುವಂತಾಯಿತು.
ಅದೇ ರೀತಿ ಪ್ರಸಕ್ತ ವೀರಾಜ ಪೇಟೆ ಕ್ಷೇತ್ರದ ಶಾಸಕರಾಗಿರುವ ಕೆ.ಜಿ. ಬೋಪಯ್ಯ, 20 ವರ್ಷದ ಹಿಂದೆ ಮೊದಲ ಬಾರಿಗೆ ಮಡಿಕೇರಿ ಕ್ಷೇತ್ರದಿಂದ ಶಾಸಕರಾಗುವದರೊಂದಿಗೆ ಈ ಗ್ರಾಮೀಣ ಭಾಗದಲ್ಲಿ ರಸ್ತೆಗಳು, ವಿದ್ಯುತ್ ಸಂಪರ್ಕದೊಂದಿಗೆ ಸಾರಿಗೆ ಸೌಲಭ್ಯ ಲಭಿಸುವಂತಾಯಿತು. ಗ್ರಾಮಸ್ಥರು ಅಕ್ಕ ಪಕ್ಕ ಊರುಗಳ ಸಹಿತ ವರ್ಷದಿಂದ ವರ್ಷಕ್ಕೆ ಸಾಕಷ್ಟು ಅಭಿವೃದ್ಧಿ ಸಾಧಿಸುವಂತಾಯಿತು.
ಇಂದು ಬದಲಾದ ದೃಶ್ಯ: ಇಂದು ಕಾಲೂರು ಗ್ರಾಮದತ್ತ ದೃಷ್ಟಿ ಹರಿಸಿದರೆ, ಪ್ರಸಕ್ತ ಸಾಲಿನ ವಿಕೋಪದಿಂದ ಪ್ರಾಕೃತಿಕವಾಗಿ ಎದುರಾಗಿರುವ ಹಾನಿಯಿಂದ ತಮ್ಮ ಗ್ರಾಮವು ಮತ್ತೆ ಅಭಿವೃದ್ಧಿ ಪಥದಿಂದ 20 ವರ್ಷ ಹಿಂದಕ್ಕೆ ಸರಿಯುವಂತಾಯಿತು ಎಂದು ಶಾಸಕ ಬೋಪಯ್ಯ ಭಾವುಕ ರಾಗುತ್ತಾರೆ. ಇಡೀ ಗದ್ದೆ ಬಯಲಿನಲ್ಲಿ ನೆಟ್ಟ ನಾಟಿಯ ಸುಳಿವೇ ಲಭಿಸದಷ್ಟು ಮಣ್ಣು ಆವರಿಸಿಕೊಂಡಿದೆ.
ಹಸಿರು ಬೆಟ್ಟ ಸಾಲಿನಿಂದ ಕಂಗೊಳಿಸುತ್ತಿದ್ದ ಭೂಸಿರಿಯನ್ನು ಪ್ರಾಕೃತಿಕ ವಿಕೋಪವು ರೌದ್ರಸ್ವರೂಪಗೊಳಿಸಿದ್ದು, ಸಾಲು ಸಾಲು ಬೆಟ್ಟಗಳಲ್ಲಿ ಹಸಿರು ಮರೆಯಾಗಿ ಕೆಮ್ಮಣ್ಣಿನ ಭಯಾನಕ ಕಂದಕಗಳು ಗೋಚರಿಸುತ್ತಿದೆ.
ಬೃಹತ್ ಮರಗಳ ರಾಶಿಯೊಂದಿಗೆ ಜಲಸ್ಫೋಟದ ಪ್ರವಾಹ ಕೊಚ್ಚಿಕೊಂಡು ಬಂದು ಗದ್ದೆ ಬಯಲುಗಳನ್ನು ನಿರ್ನಾಮ ಗೊಳಿಸಿರುವ ಚಿತ್ರಣ ಕಣ್ಣುಕಟ್ಟಲಿವೆ.
ಕಾಲೂರು ಸುತ್ತಮುತ್ತಲಿನ ಗ್ರಾಮ ರಸ್ತೆಗಳ ಮೂಲಕ ಮಾಂದಲಪಟ್ಟಿಯತ್ತ ಸಾಗುತ್ತಿದ್ದ ಪ್ರವಾಸಿಗರ ಮತ್ತು ವಾಹನ ಚಾಲಕರ ಎದೆ ಝಲ್ಲೆನಿಸುವಂತೆ ದಾರಿಯನ್ನೇ ಬದಲಾಯಿಸಿರುವ ಘೋರ ಸನ್ನಿವೇಶ ಒಂದೆಡೆಯಾದರೆ, ಅಷ್ಟ ದಿಕ್ಕುಗಳಿಂದ ಗೋಚರಿಸುವ ಬೆಟ್ಟ ಸಾಲುಗಳ ಕುಸಿತದಿಂದ ಮನುಕುಲದ ಬದುಕನ್ನೇ ತಲ್ಲಣಗೊಳಿಸುವ ಭೀಕರತೆ ಪ್ರತ್ಯಕ್ಷವಾಗಲಿದೆ.
ಜಲಪಾತ ಸೃಷ್ಟಿ : ದೇವಸ್ತೂರು, ತಂತಿಪಾಲ, ಮುಕ್ಕೋಡ್ಲು, ಆವಂಡಿ, ನಿಡುವಟ್ಟು, ಕಾಲೂರು ವ್ಯಾಪ್ತಿಯ ಅಲ್ಲಲ್ಲಿ ಭುವಿಯೊಡಲಿನಿಂದ ಚಿಮ್ಮಿರುವ ಜಲಸ್ಫೋಟವು ಹೊಸ ಹೊಸ ಜಲಪಾತಗಳನ್ನು ಸೃಷ್ಟಿಸಿರುವ ದೃಶ್ಯ ಎದುರಾದರೆ, ಗ್ರಾಮೀಣ ಹಾದಿಯ ದಿಕ್ಕು ಬದಲಾಗಿರುವ ಹಲವು ಪ್ರಸಂಗಗಳು ಗೋಚರಿಸಲಿವೆ.
ಶತಮಾನಗಳ ಕೃಷಿ ಮಾಯ: ಇತ್ತೀಚಿನ ವರ್ಷಗಳಲ್ಲಿ ಗ್ರಾಮಸ್ಥರು ಭವಿಷ್ಯದ ಆಶಯದೊಂದಿಗೆ, ರಕ್ತವನ್ನು ಬೆವರಾಗಿಸಿ ಶ್ರಮಪಡುವ ಮೂಲಕ, ರೂಡಿಸಿದ್ದ ಕಾಫಿ ಮತ್ತಿತರ ತೋಟಗಾರಿಕಾ ಬೆಳೆಗಳ ನಾಶ ದೊಂದಿಗೆ, ಶತಮಾನಗಳಿಂದ ಪೂರ್ವಜರು ರೂಢಿಸಿಕೊಂಡು ಬಂದಿದ್ದ ಗದ್ದೆ ಬಯಲು ಗುರುತಿಸ ಲಾರದಂತೆ ಇಂದು ಅಳಿಸಿ ಹೋಗಿವೆ. ಇಲ್ಲಿ ಯಾರ ಗದ್ದೆ ಎಲ್ಲೆದೆ ಯೆಂದು ಗುರತಿಸಲೂ ಸಾಧ್ಯವಿಲ್ಲ.
ಪರಿಣಾಮ ಭಯಾನಕ: ಹೀಗಾಗಿ ಕೆಲವೆಡೆ ನಾಟಿಯಾಗಿರುವ ಗದ್ದೆಗಳಲ್ಲಿ ಅತಿವೃಷ್ಟಿಯ ನಡುವೆಯೂ ನೀರಿಲ್ಲದೆ ಬಣಗುಟ್ಟುತ್ತಿರುವ ಆಘಾತಕಾರಿ ದೃಶ್ಯ ಎದುರಾಗಲಿದೆ. ಇನ್ನೊಂದೆಡೆ ಗದ್ದೆಯ ಬಯಲುಗಳಲ್ಲಿ ಶತಮಾನ ದಿಂದ ಪೈರು ಅಥವಾ ಬೆಳೆಗೆ ಕಾಲ ಕಾಲಕ್ಕೆ ನೀರುಣಿಸುತ್ತಿದ್ದ ತೋಡುಗಳು ಎಲ್ಲಿ ಎಂದು ತಿಳಿಯದಾಗಿದೆ. ಜಲಸ್ಫೋಟದಿಂದ ಎಲ್ಲಿ ಎಂದು ತಿಳಿಯದಾಗಿದೆ. ಜಲಸ್ಫೋಟದಿಂದ ಹೊಳೆಗಳ ದಿಕ್ಕು ಬದಲಾಗಿದ್ದು, ಎಲ್ಲೆಲ್ಲೊ ಮಣ್ಣ ಮಿಶ್ರಿತ ನೀರು ಹರಿಯುವ ಜರಿಗಳನ್ನು ಕಾಣಬಹುದಾಗಿದೆ.