ಕೂಡಿಗೆ, ಸೆ. 6 : ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಕೂಡಿಗೆಯ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ಪ್ರಕೃತಿ ವಿಕೋಪ ಜಾನುವಾರು ಸಂರಕ್ಷಣಾ ಮತ್ತು ಪಾಲನ ಕೇಂದ್ರವನ್ನು ಆರಂಭಿಸಲಾಗಿದ್ದು, ನೆರೆ ಪ್ರದೇಶಗಳಾದ ಮುಕ್ಕೋಡ್ಲು, ಹಟ್ಟಿಹೊಳೆ, ಮಾದಾಪುರ, ಇಗ್ಗೋಡ್ಲು, ತಂತಿಪಾಲ ಸೇರಿದಂತೆ ಕೆಲವು ಪ್ರದೇಶಗಳಿಂದ ಈಗಾಗಲೇ 101 ಹಸುಗಳ ಪಾಲನೆ ನಡೆಯುತ್ತಿದೆ.

ಪ್ರಕೃತಿ ವಿಕೋಪದಿಂದ ನಿರಾಶ್ರಿತವಾಗಿರುವ ಹಸುಗಳನ್ನು ಸಂರಕ್ಷಿಸಿ, ಪಾಲನೆ ಮಾಡಲು ಜಿಲ್ಲಾಧಿಕಾರಿಗಳ ಆದೇಶದನ್ವಯ ಪಶುಪಾಲನಾ ಇಲಾಖೆಯ ಮೂಲಕ ಆಯಾ ಗ್ರಾಮಗಳಲ್ಲಿ ಸಾಕಿದ್ದ ಹಸುಗಳನ್ನು ಅಲ್ಲಿನ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಕೂಡಿಗೆಯ ಜರ್ಸಿತಳಿ ಸಂವರ್ಧನಾ ಕೇಂದ್ರದಲ್ಲಿ ಸಂರಕ್ಷಣೆ ಮಾಡಲಾಗುತ್ತಿದೆ. ಈಗಾಗಲೇ ಕೇಂದ್ರದಲ್ಲಿ 101 ಹಸುಗಳನ್ನು ಪಾಲನೆ ಮಾಡಲಾಗುತ್ತಿದೆ. ಅಲ್ಲದೆ, ಹಂದಿಗಳಿಗೆ ಬೇಕಾಗುವ ಆಹಾರವನ್ನು ನಿರಾಶ್ರಿತರ ಗ್ರಾಮಗಳಿಗೆ ತೆರಳಿ ಇಲಾಖೆಯ ಮೂಲಕ ಆಹಾರವನ್ನು ವಿತರಿಸಲಾಗುತ್ತಿದೆ. ಕೂಡಿಗೆ ಕೇಂದ್ರದಲ್ಲಿ 3 ತಿಂಗಳ ವರೆಗೆ ಹಸುಗಳನ್ನು ಪಾಲನೆ ಮಾಡಲು ಸಿದ್ಧತೆ ಮಾಡಲಾಗಿದ್ದು, ನೀರು, ವಿದ್ಯುತ್ ವ್ಯವಸ್ಥೆ ಮಾಡಿದ್ದು, ಹಸುಗಳಿಗೆ ಬೇಕಾಗುವ ಆಹಾರವನ್ನು ಹಾಸನ ಹಾಲು ಒಕ್ಕೂಟದ ಕೆಎಂಎಫ್ 10 ಟನ್ ಆಹಾರವನ್ನು ಉಚಿತವಾಗಿ ನೀಡಿದೆ. ಮೈಸೂರಿನ ಖಾಸಗಿ ಪಶು ಆಹಾರ ಸಂಸ್ಥೆಯವರು ಆಹಾರವನ್ನು ನೀಡಿದ್ದಾರೆ. ಇದರೊಂದಿಗೆ ಹಸುಗಳಿಗೆ ಬೇಕಾಗುವ ಒಣಹುಲ್ಲನ್ನು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಫಾರಂನಿಂದ ತರಿಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಿಂದ ಉಚಿತವಾಗಿ ಒಣಹುಲ್ಲು ಮತ್ತು ಹಸಿ ಜೋಳದ ಹುಲ್ಲನ್ನು ಒದಗಿಸಿದ್ದಾರೆ. ಇದರ ಜೊತೆಯಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಜಣ್ಣ ಎಂಬವರು ಒಂದೂವರೆ ಎಕರೆ ಪ್ರದೇಶದ ಹಸಿ ಜೋಳವನ್ನು ಉಚಿತವಾಗಿ ನೀಡಿದ್ದಾರೆ. ಇಲಾಖೆಯ ವತಿಯಿಂದ ಹಸಿ ಮತ್ತು ಒಣಹುಲ್ಲು, ಜೋಳದ ಕಟ್ಟಿಯನ್ನು ಯಂತ್ರದ ಮೂಲಕ ತುಂಡು ಮಾಡಿ ನಂತರ ಪಶು ಆಹಾರದೊಂದಿಗೆ ಹಸುಗಳಿಗೆ ನೀಡಲಾಗುತ್ತಿದೆ. ಔಷಧಿಗಳು ಜರ್ಸಿ ಕೇಂದ್ರದಲ್ಲಿ ಇರುವುದರಿಂದ ಹಸುಗಳಿಗೆ ದಿನಂಪ್ರತಿ ತಪಾಸಣೆ ಮಾಡಿ, ಚಿಕಿತ್ಸೆ ನೀಡಿ ಪಾಲನೆ ಮಾಡಲಾಗುತ್ತಿದೆ ಎಂದು ಜರ್ಸಿ ತಳಿ ಸಂವರ್ಧನಾ ಕೇಂದ್ರದ ರಾಜ್ಯ ವಲಯ ಜಂಟಿ ನಿರ್ದೇಶಕ ಡಾ.ದೇವದಾಸ್ ತಿಳಿಸಿದ್ದಾರೆ. ಇದರೊಂದಿಗೆ ಜಿಲ್ಲಾ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಮತ್ತು ಮೂರು ತಾಲೂಕಿನ ಸಹಾಯಕ ನಿರ್ದೇಶಕರು, ಕೇಂದ್ರದ ತಾಂತ್ರೀಕ ಸಿಬ್ಬಂದಿಗಳು ಹಸುಗಳ ಪಾಲನೆ ಮತ್ತು ಸಂರಕ್ಷಣೆಯಲ್ಲಿ ತೊಡಗಿದ್ದಾರೆ.

ಇವೆಲ್ಲವುಗಳ ಜೊತೆಯಲ್ಲಿ ಆಯಾ ಗ್ರಾಮಗಳಿಂದ ತಂದಿರುವ ಹಸುಗಳಿಗೆ ಮಾಲೀಕರ ಹೆಸರುಗಳನ್ನು ಮತ್ತು ಹಸುಗಳ ವಿವರಗಳ ದಾಖಲಾತಿಯನ್ನು ಇಡಲಾಗಿದೆ. ಹಸುಗಳಿಗೆ ಉಚಿತವಾಗಿ ಆಹಾರ ನೀಡಬಯಸುವವರು ಕೂಡಿಗೆ ಜರ್ಸಿ ತಳಿ ಸಂವರ್ಧನಾ ಕೇಂದ್ರಕ್ಕೆ ನೀಡಬೇಕು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. -ಕೆ. ಕೆ. ನಾಗರಾಜಶೆಟ್ಟಿ.