ಅರಂತೋಡು, ಸೆ. 5: ತೀವ್ರ ಮಳೆಯ ಪರಿಣಾಮದಿಂದ ಗುಡ್ಡ ಕುಸಿದು 4 ಮಂದಿ ಮೃತರಾದ ಜೋಡುಪಾಲ ಪ್ರದೇಶಕ್ಕೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಭೇಟಿ ನೀಡಿದರು. ಮೊಣ್ಣಂಗೇರಿ ಬಳಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ವೀಕ್ಷಣೆ ನಡೆಸಿದರು. ಸಂಪಾಜೆಯಲ್ಲಿರುವ ಸಂತ್ರಸ್ತರ ಕೇಂದ್ರಕ್ಕೆ ಭೇಟಿ ನೀಡಿ ಅಹವಾಲನ್ನು ಆಲಿಸಿ, ಪರಿಹಾರದ ಸೂಕ್ತ ವ್ಯವಸ್ಥೆಯನ್ನು ಮಾಡಿದರು. ಸ್ಥಳಿಯರು ಅನೇಕ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಭೇಟಿಯ ಸಂದರ್ಭ ಸುಳ್ಯ ತಹಶೀಲ್ದಾರ್ ಕುಂಞಮ್ಮ, ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ. ಶಹೀದ್, ಕಂದಾಯಾಧಿಕಾರಿ ಆರ್.ಐ. ಅವಿನ್ ಕುಮಾರ್ ಮತ್ತು ಕೊಡಗು- ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ಕಳಗಿ ಮೊದಲಾದವರು ಉಪಸ್ಥಿತರಿದ್ದರು.
ಅರಂತೋಡಿನ ತೆಕ್ಕಿಲ್ ಸಮುದಾಯ ಭವನದಲ್ಲಿ ಆಶ್ರಯ ಪಡೆದಿದ್ದವರ ಪೈಕಿ ಮನೆ ಕಳೆದುಕೊಂಡು ಅರಂತೋಡು ಟಿ.ಎಂ. ಶಹೀದ್ ಅವರ ತೆಕ್ಕಿಲ್ ಮನೆಯಲ್ಲಿ ಆಶ್ರಯ ಪಡೆದಿರುವ ಜೋಡುಪಾಲ ಮೂಲದ ಕುಟುಂಬದವರನ್ನು ಜಿಲ್ಲಾಧಿಕಾರಿ ಶ್ರೀವಿದ್ಯಾ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಅಹವಾಲುಗಳನ್ನು ಆಲಿಸಿದರು.