ಮಡಿಕೇರಿ, ಸೆ. 5: ಪ್ರಾಕೃತಿಕ ವಿಕೋಪದಿಂದ ವಾಸದ ಮನೆಗಳನ್ನು ಕಳೆದುಕೊಂಡಿರುವವರಿಗೆ, ತುರ್ತಾಗಿ ತಾತ್ಕಾಲಿಕ ವ್ಯವಸ್ಥೆ ರೂಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು. ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಇಂದು ಸಂಜೆ ಮಹತ್ವದ ಸಭೆ ನಡೆಸಿದ ಸಚಿವರು, ಯಾರು ಲಿಖಿತ ರೂಪದಲ್ಲಿ ತಾತ್ಕಾಲಿಕ ವ್ಯವಸ್ಥೆಗೆ ಒಪ್ಪಿಗೆ ಸೂಚಿಸುವರೋ ಅಂತಹ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ನಿರ್ದೇಶಿಸಿದರು.ಜಿಲ್ಲೆಯಲ್ಲಿ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ನಿಯೋಜನೆಗೊಂಡಿರುವ ವಿಶೇಷ ಉಪವಿಭಾಗಾಧಿಕಾರಿ ಜಗದೀಶ್ ಅವರು, ಸಚಿವರಿಗೆ ವರದಿ ನೀಡುತ್ತಾ, ಸುಮಾರು 700 ಕುಟುಂಬಗಳ ಪೈಕಿ 300ಕ್ಕೂ ಅಧಿಕ ಮಂದಿ ಈಗಾಗಲೇ ಲಿಖಿತ ಒಪ್ಪಿಗೆ ನೀಡಿರುವದಾಗಿ ಗಮನ ಸೆಳೆದರು.
ಅಲ್ಲದೆ, ಈಗಾಗಲೇ ಮಾದರಿ ಶೆಡ್ ರಚಿಸಿ, ಸಂತ್ರಸ್ತರಿಗೆ ತಾತ್ಕಾಲಿಕ ವಾಗಿ ವಸತಿ ಕಲ್ಪಿಸಲು ಗಾಂಧಿ ಮೈದಾನದಲ್ಲಿ ಪ್ರದರ್ಶಿಸಿದ್ದು, ಖುದ್ದು ವೀಕ್ಷಿಸಿ ಲಿಖಿತವಾಗಿ ಒಪ್ಪಿಕೊಳ್ಳು ವವರಿಗೆ ಸೌಲಭ್ಯ ನೀಡಲಾಗುವದು ಎಂದು ವಿವರಿಸಿದ ಮೇರೆಗೆ, ಸಚಿವರು ಅಗತ್ಯ ಗಮನ ಹರಿಸಲು ಸಮ್ಮತಿಸಿದರು.
ಮಡಿಕೇರಿಗೆ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಸಾಕಷ್ಟು ಮಂದಿ ಪುನರ್ವಸತಿಗಾಗಿ ಮನೆಗಳನ್ನು ಕಳೆದುಕೊಂಡಿದ್ದರೂ ಅರ್ಜಿ ಸಲ್ಲಿಸಲು ಸಾಧ್ಯವಾಗದಿರುವ ಕುರಿತು ಸಚಿವರ ಗಮನ ಸೆಳೆದರು, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಮಾತನಾಡಿ, ಯಾರು ತುರ್ತು ಪುನರ್ವಸತಿಗೆ ಸಮ್ಮತಿ ನೀಡಿದ್ದಲ್ಲದೆ, ವಾಸಕ್ಕೆ ಮನೆಗಳೇ ಇಲ್ಲದಂತಹ ಕುಟುಂಬಗಳಿಗೆ ಮಾತ್ರ ಮೊದಲ ಆದ್ಯತೆಯೊಂದಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವದಾಗಿ ಸ್ಪಷ್ಟಪಡಿಸಿದರು.
ಈಗಾಗಲೇ ಕಂದಾಯ ಇಲಾಖೆ ಯಿಂದ ನೈಜ ಸಂತ್ರಸ್ತರ ಮಾಹಿತಿ ಕಲೆ ಹಾಕುತ್ತಿದ್ದು, ಪರಿಹಾರ ಕೇಂದ್ರಗಳನ್ನೇ ಅವಲಂಬಿಸಿರು ವವರಿಗೆ ಈ ತಾತ್ಕಾಲಿಕ ವಸತಿ ಒದಗಿಸಲು ನಿರ್ಧಾರ ತೆಗೆದು ಕೊಳ್ಳಲಾಗುವದೆಂದು ಜಿಲ್ಲಾಧಿಕಾರಿ ಸಭೆಯ ಗಮನ ಸೆಳೆದರು. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮೇಲ್ಮನೆ ಸದಸ್ಯರು ಗಳಾದ ವೀಣಾ ಅಚ್ಚಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ. ಪಣ್ಣೆಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಆ ಮುನ್ನ ಸಚಿವರು ಸಾರ್ವಜನಿಕ ಅರ್ಜಿಗಳನ್ನು ಸ್ವೀಕರಿಸಿ, ವಿವಿಧ ಸಮಸ್ಯೆಗಳ ಈಡೇರಿಕೆ ಸಂಬಂಧ ಇಲಾಖಾ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.