ಮಡಿಕೇರಿ, ಸೆ. 5: ಮಕ್ಕಳ ಬೆಳವಣಿಗೆ ಸಮತೋಲಿತ ಮತ್ತು ಆರೋಗ್ಯಯುತವಾಗಿರಲು ಪೌಷ್ಟಿಕ ಆಹಾರ ಅತ್ಯಗತ್ಯ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯವಾಗಿ ಸಿಗುವಂತಹ ಆಹಾರ ಪದಾರ್ಥಗಳು ಎಲ್ಲಾ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದ್ದು, ಇದರ ಸದುಪಯೋಗ ವನ್ನು ತಾಯಂದಿರು ಮಕ್ಕಳಿಗೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಕ್ಕಳ ವಿಭಾಗದ ಹಿರಿಯ ತಜ್ಞರಾದ ಡಾ.ಕೃಷ್ಣಾನಂದ್ ಪ್ರತಿ ಮಗುವಿಗೆ ಮೊದಲ ಎರಡು ವರ್ಷದಲ್ಲಿ ಪೌಷ್ಟಿಕ ಆಹಾರವು ಮಗುವಿನ ಭೌತಿಕ ಹಾಗೂ ಮಾನಸಿಕ ಬೆಳವಣಿಗೆಗೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ತಾಯಂದಿರು ಇದರ ಬಗ್ಗೆ ಹೆಚ್ಚಿನ ಗಮನವಹಿಸಿ ಪೌಷ್ಟಿಕ ಆಹಾರದ ಕೊರತೆ ಉಂಟಾಗದಂತೆ ನೋಡಿಕೊಳ್ಳ ಬೇಕು ಎಂದು ಹೇಳಿದರು.
ಜಿಲ್ಲಾ ಸರ್ಜನ್ ಡಾ.ಜಗದೀಶ್ ಅವರು ಮಾತನಾಡಿ ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತ್ಯವಶ್ಯಕ. ಮಕ್ಕಳ ಬೆಳವಣಿಗೆ ಹಂತದಲ್ಲಿ ಪೌಷ್ಟಿಕ ಆಹಾರದ ಕೊರತೆ ಕಾಣಿಸಿಕೊಳ್ಳದಂತೆ ಗಮನಹರಿಸಿ ತಾಯಂದಿರು ಹೆಚ್ಚು ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ನೀಡಿ ಮಕ್ಕಳನ್ನು ಆರೋಗ್ಯಯುತರಾಗಿ ಬೆಳಸುವಂತಾಗಬೇಕು ಎಂದು ನುಡಿದರು.
ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ.ರಾಮಚಂದ್ರ ಕಾಮತ್ ಮಾತನಾಡಿ ಸಾತ್ವಿಕ ಹಾಗೂ ಸಮತೋಲನ ಆಹಾರದಿಂದ ಮಗು ಮತ್ತು ತಾಯಂದಿರ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ನುಡಿದರು.
ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಪುರುಷೋತ್ತಮ್ ಅವರು ಮಾತನಾಡಿ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹವು ತಾ.1 ರಿಂದ 7 ರವರೆಗೆ ನಡೆಯಲಿದ್ದು, ಇದರ ಮಹತ್ವವನ್ನು ತಾಯಂದಿರಿಗೆ ತಿಳಿಸುವದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಭೋಧಕ ಆಸ್ಪತ್ರೆಯ ಆಡಳಿತಾಧಿಕಾರಿ ಮೇರಿ ನಾಣಯ್ಯ, ವೈದ್ಯರು, ಶುಶ್ರೂಕಿಯರು, ವೈದ್ಯಕೀಯ ವಿದ್ಯಾರ್ಥಿಗಳು ಇತರರು ಇದ್ದರು. ಮಕ್ಕಳ ವಿಭಾಗದ ವೈದ್ಯರಾದ ಡಾ.ಮಾಲತೇಶ್ ಅವರು ಸ್ವಾಗತಿಸಿ, ನಿರೂಪಿಸಿದರು. ಡಾ.ಕುಮಾರ್ ವಂದಿಸಿದರು.