ಮಡಿಕೇರಿ, ಸೆ. 6: ಈ ಬಾರಿ ಅತಿವೃಷ್ಟಿಯ ಗಾಳಿ, ಮಳೆಯಿಂದಾಗಿ ಕಾಫಿ ತೋಟಗಳು ಮತ್ತು ಕೃಷಿ ಭೂಮಿಗಳು ತೀವ್ರ ಹಾನಿಗೀಡಾಗಿ ಜಖಂ ಆಗಿರುತ್ತದೆ. ಇದರಲ್ಲಿ ಬೆಳೆದಿರುವ ಕಾಫಿ, ಏಲಕ್ಕಿ, ಕರಿಮೆಣಸು ಫಸಲುಗಳು ನಾಶವಾಗಿರುತ್ತವೆ.
ಹಲವಾರು ರೈತರು, ಕಾಫಿ ಬೆಳೆಗಾರರು, ತಾವೇ ನೆಟ್ಟು ಬೆಳೆಸಿದ ಮರಗಳಾದ ಬಳಂಜಿ, ಸಿಲ್ವರ್, ಮೈಸಾಪೀಸ್, ಪಾನುವಾಳ ಮರಗಳು ಗಾಳಿ, ಮಳೆಯಿಂದ ನೆಲದಲ್ಲಿ ಬಿದ್ದು ಕುಂಬಾಗಿ ನಾಶವಾಗುತ್ತಿದೆ. ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಈ ಸ್ವತ್ತುಗಳನ್ನು ಸಾಗಾಟ ಮಾಡಲಾಗದೆ, ರೈತರಿಗೆ ಎರಡನೇ ಆದಾಯ ತರುವ ಮರದ ದಿಮ್ಮಿಗಳು ಮತ್ತು ಸೌದೆಗಳಿಂದ ತುಂಬಲಾರದ ನಷ್ಟವಾಗುತ್ತಿದೆ.
ರೈತಾಪಿ ಜನರ ಜೀವನೋಪಾಯದ ಅನುಕೂಲಕ್ಕಾಗಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶವನ್ನು ತೆರವುಗೊಳಿಸಿ, ಮಳೆ, ಗಾಳಿಯಿಂದ ಮರಗಳ ದಿಮ್ಮಿಗಳನ್ನು ಮತ್ತು ಸೌದೆಗಳನ್ನು ಜಿಲ್ಲೆಯಿಂದ ಹೊರಗೆ ಸಾಗಿಸಲು ಅನುವು ಮಾಡಿಕೊಡಬೇಕಾಗಿ ಕಾಫಿ ಬೆಳೆಗಾರರ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭ ಸಮಿತಿ ಅಧ್ಯಕ್ಷ ಎಂ.ಸಿ. ಮುದ್ದಪ್ಪ, ಕಾರ್ಯದರ್ಶಿ ಬಿ.ಎಸ್. ಸುದೀಪ್, ವಕ್ತಾರ ಎಂ.ಪಿ. ಶ್ಯಾಂ ಪ್ರಸಾದ್, ಹೆಚ್.ಎಂ. ಪ್ರಕಾಶ್, ಬೆಳೆಗಾರರಾದ ಹೆಚ್.ಸಿ. ಅರವಿಂದ, ಎ. ಪೂವಯ್ಯ ಇನ್ನಿತರರಿದ್ದರು.