ಮಡಿಕೇರಿ, ಸೆ. 5: ಕೊಡಗು ಜಿಲ್ಲೆಯ ವ್ಯಕ್ತಿಯೊಬ್ಬರು ಇದೇ ಪ್ರಥಮ ಬಾರಿಗೆ ಮೈಸೂರು ನಗರ ಪಾಲಿಕೆಯ ಸದಸ್ಯರಾಗಿ ಚುನಾಯಿತರಾಗುವ ಮೂಲಕ ಕೊಡಗು ಜಿಲ್ಲೆ ಹೊರತುಪಡಿಸಿ ನೆರೆಯ ಜಿಲ್ಲೆಯಲ್ಲಿ ರಾಜಕೀಯ ಛಾಪು ಮೂಡಿಸಿದ್ದಾರೆ. ಮೂಲತಃ ಜಿಲ್ಲೆಯ ಕುಕ್ಲೂರುವಿನವರಾದ ವಕೀಲ ಮಾಳೇಟಿರ ಯು. ಸುಬ್ಬಯ್ಯ ಇದೀಗ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಈ ಹಿಂದೆ ಸುಬ್ಬಯ್ಯ ಅವರು ಅಲ್ಲಿನ ಹಿನಕಲ್ ಗ್ರಾಮ ಪಂಚಾಯಿತಿಯ ಸದಸ್ಯರೂ ಆಗಿ, ಇದೀಗ ಈ ಪಂಚಾಯಿತಿಯ ಕ್ಷೇತ್ರವೂ ಒಳಗೊಂಡಂತಹ ವಿಜಯನಗರ ಕ್ಷೇತ್ರ (ವಾರ್ಡ್ ಸಂಖ್ಯೆ 20) ದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದಾರೆ.

ಪ್ರಸ್ತುತ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಒಟ್ಟು ಐದು ಅಭ್ಯರ್ಥಿಗಳು ಕಣದಲ್ಲಿದ್ದರು. ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಬಿಜೆಪಿ ಹುರಿಯಾಳಾಗಿದ್ದ ಸುಬ್ಬಯ್ಯ 423 ಮತಗಳ ಅಂತರದಿಂದ ಜಯಭೇರಿ ಬಾರಿಸಿ ಮೈಸೂರು ನಗರ ಪಾಲಿಕೆಗೆ ಪ್ರವೇಶಿಸಿದ್ದಾರೆ.

ಸುಬ್ಬಯ್ಯ ಅವರು 2245 ಮತ ಪಡೆದು ಸಮೀಪದ ಪ್ರತಿಸ್ಪರ್ಧಿ ಯಾಗಿದ್ದ ಜೆಡಿಎಸ್ ಅಭ್ಯರ್ಥಿಯನ್ನು ಪರಾಭವಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿಗೆ 1,822, ಕಾಂಗ್ರೆಸ್ ಅಭ್ಯರ್ಥಿಗೆ 1,146 ಹಾಗೂ ಪಕ್ಷೇತರರಾಗಿ ಕಣದಲ್ಲಿದ್ದ ಅಭ್ಯರ್ಥಿಗಳಿಬ್ಬರಿಗೆ 90 ಹಾಗೂ 48 ಮತಗಳು ಲಭ್ಯವಾಗಿವೆ.

ತಮ್ಮ ಗೆಲುವಿನ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಸುಬ್ಬಯ್ಯ ಅವರು ಈ ಕ್ಷೇತ್ರದ ಟಿಕೆಟ್‍ಗಾಗಿ ಪಕ್ಷದಲ್ಲಿ ಪ್ರಬಲ ಸ್ಪರ್ಧೆಯಿದ್ದು, ಪಕ್ಷದ ವರಿಷ್ಠರು ತಮಗೆ ಅವಕಾಶ ನೀಡಿದ್ದರು. ಜನತೆ ಕೊಟ್ಟಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೊಡಗಿನ ಗೌರವಕ್ಕೆ ಚ್ಯುತಿಬಾರದಂತೆ ಜನಪರವಾಗಿ ಕೆಲಸ ನಿರ್ವಹಿಸುವದಾಗಿ ನುಡಿದರು.

ಕುಕ್ಲೂರುವಿನ ಮಾಳೇಟಿರ ಉತ್ತಯ್ಯ (ಜಿಮ್ಮ) ಹಾಗೂ ಶಾಂತಿ ದಂಪತಿಯ ಪುತ್ರರಾದ ಸುಬ್ಬಯ್ಯ ಮೇವಡ ಭಾಗ್ಯ ಅವರನ್ನು ವರಿಸಿದ್ದು, ವಕೀಲರಾಗಿ ಮೈಸೂರಿನಲ್ಲಿದ್ದಾರೆ. ಈ ಹಿಂದೆ ಮೈಸೂರು ಬಾರ್ ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿಯೂ ಇವರು ಕರ್ತವ್ಯ ನಿರ್ವಹಿಸಿದ್ದಾರೆ.

ಈ ಹಿಂದೆ ಮೈಸೂರು ಪುರಸಭೆಯಾಗಿದ್ದ ಸಂದರ್ಭ ಬಲ್ಲಚಂಡ ಬೆಳ್ಯಪ್ಪ (ಪಟ್ಟು ಬ್ರದರ್ಸ್) ಅವರು ಸದಸ್ಯರಾಗಿದ್ದರು. ಇದಾದ ಬಳಿಕ ಕೊಡಗಿನವರೊಬ್ಬರು ನೆರೆ ಜಿಲ್ಲೆ ಮೈಸೂರಿನಲ್ಲಿ ಚುನಾವಣೆಯಲ್ಲಿ ಜಯಗಳಿಸಿರುವದು ಇದೇ ಪ್ರಥಮ ಬಾರಿಯಾಗಿದೆ.

-ಶಶಿ