ಸೋಮವಾರಪೇಟೆ, ಸೆ. 6: ತಾಲೂಕಿನ ಕೊತ್ನಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಸೋಮವಾರಪೇಟೆ ರೋಟರಿ ಹಿಲ್ಸ್ ಸಂಸ್ಥೆಯವರು ದತ್ತು ಪಡೆದಿದ್ದಾರೆ.
ಕುಗ್ರಾಮಗಳಲ್ಲಿ ಒಂದಾದ ಕೊತ್ನಳ್ಳಿ ಪ್ರಾಥಮಿಕ ಶಾಲೆಯನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ರೋಟರಿ ಸಂಸ್ಥೆಯ ವತಿಯಿಂದ ದತ್ತುಪಡೆಯಲಾಗಿದೆ ಎಂದು ಅಧ್ಯಕ್ಷ ಪಿ.ಕೆ.ರವಿ ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಈಗಾಗಲೇ ಗ್ರಾಮೀಣ ಪ್ರದೇಶಗಳ ಹಲವು ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿರುವದು ಬೇಸರದ ವಿಚಾರ. ಅಲ್ಲದೆ ಕುಮಾರಳ್ಳಿ ಗ್ರಾಮದಲ್ಲಿ ಶಾಲೆಯನ್ನು ಮುಚ್ಚಲಾಗಿದೆ. ಶಾಂತಳ್ಳಿ ಹಾಗೂ ಬೆಟ್ಟದಳ್ಳಿ ಗ್ರಾಮದಲ್ಲಿರುವ ಶಾಲೆಗಳನ್ನು ಹೊರತು ಪಡಿಸಿದರೆ ಇಡೀ ಎರಡೂ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸರ್ಕಾರಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿಲ್ಲ. ಕಟ್ಟಡ, ಮೈದಾನ ಸೇರಿದಂತೆ ಎಲ್ಲಾ ಅನುಕೂಲತೆಗಳನ್ನು ಹೊಂದಿರುವ ಕೊತ್ತನಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನವನ್ನು ಸಂಸ್ಥೆಯ ವತಿಯಿಂದ ಮಾಡಲಾಗುವದು ಎಂದರು.
ಪ್ರಾಥಮಿಕ ಹಂತವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕಗಳು, ಲೇಖನ ಸಾಮಗ್ರಿಗಳು, ಶೂ, ಕೊಡೆ ಸೇರಿದಂತೆ ಇನ್ನಿತರ ಅಗತ್ಯ ಪರಿಕರಗಳನ್ನು ವಿತರಿಸಲಾಯಿತು. ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಮಾತನಾಡಿ, ಸೇವಾಪರ ಸಂಘ ಸಂಸ್ಥೆಗಳು ಕುಗ್ರಾಮಗಳಲ್ಲಿರುವಂತಹ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಕಲಿಕೆಗೆ ಸರ್ಕಾರ ಮುಂದಾದಲ್ಲಿ ಗ್ರಾಮೀಣ ಶಾಲೆಗಳನ್ನು ಉಳಿಸಲು ಸಾಧ್ಯವಾಗಬಹುದು ಎಂದರು.