ಶನಿವಾರಸಂತೆ, ಸೆ. 5: ವಿದ್ಯಾರ್ಥಿ ಜೀವನದಲ್ಲಿ ಪಾಠ-ಪ್ರವಚನದ ಜತೆಗೆ ಕ್ರೀಡೆಗೂ ಮಹತ್ವ ನೀಡಬೇಕು ಎಂದು ಪ್ರಜ್ವಲ್ ಎಜುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಹೆಚ್.ಪಿ. ಗುಂಡಪ್ಪ ಅಭಿಪ್ರಾಯ ಪಟ್ಟರು. ಪಟ್ಟಣದ ಕಾವೇರಿ ವಿದ್ಯಾ ಸಂಸ್ಥೆಯ ಕ್ರೀಡಾ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಾವೇರಿ ವಿದ್ಯಾಸಂಸ್ಥೆಯ ಸಹಭಾಗಿತ್ವದಲ್ಲಿ ತಾ. 1 ರಿಂದ 4 ರವರೆಗಿನ ಪ್ರೌಢಶಾಲಾ ವಿಭಾಗದ ವಲಯಮಟ್ಟದ ಕ್ರೀಡಾಕೂಟವನ್ನು ಕ್ರೀಡಾ ಜ್ಯೋತಿ ಬೆಳಗಿಸಿ, ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಕ್ರೀಡಾಕೂಟದಲ್ಲಿ ಭಾಗವಹಿಸು ವದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆಯೊಂದಿಗೆ ಕ್ರೀಡಾ ಮನೋಭಾವನೆಯು ಮೈಗೂಡುತ್ತದೆ ಎಂದು ಗುಂಡಪ್ಪ ಹೇಳಿದರು.

ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹೆಚ್.ಎನ್. ದೇವರಾಜ್ ಮಾತನಾಡಿ, ಸತತ ಅಭ್ಯಾಸ ಹಾಗೂ ಶ್ರದ್ಧಾ ಮನೋಭಾವವೇ ಗೆಲುವಿನ ರಹಸ್ಯ. ಸೋಲು-ಗೆಲುವಿಗೆ ಸೋಪಾನವಾಗುವದರಿಂದ ಕ್ರೀಡಾಪಟು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಕಿವಿಮಾತು ಹೇಳಿದರು.

ಟ್ರಸ್ಟ್‍ನ ಕಾರ್ಯದರ್ಶಿ ಜಿ.ಎಂ. ಹೂವಯ್ಯ, ಮುಖ್ಯ ಶಿಕ್ಷಕ ಹೆಚ್.ಎನ್. ಹೂವಯ್ಯ, ವಲಯಮಟ್ಟದ ಕ್ರೀಡಾ ಕಾರ್ಯದರ್ಶಿ ಪುಟ್ಟಸ್ವಾಮಿ, ವಿವಿಧ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಹಾಜರಿದ್ದರು.