ವೀರಾಜಪೇಟೆ ಸೆ. 6: ಇತಿಹಾಸ ಪ್ರಸಿದ್ದವಾದ ಗೌರಿ ಗಣೇಶ ಉತ್ಸವವನ್ನು ಪೂರ್ವಕಾಲದಿಂದಲೂ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದು, ಈ ಬಾರಿ ಗೌರಿ ಗಣೇಶ ಉತ್ಸವವನ್ನು ಸರಳ ರೀತಿಯಲ್ಲಿ ಆಚರಿಸಿ ಆಡಂಬರ ವೆಚ್ಚದ ಉಳಿಕೆ ಹಣವನ್ನು ನೆರೆ ಸಂತ್ರಸ್ತರ ನೆರವಿಗೆ ನೀಡುತ್ತಿರುವದು ಉತ್ಸವ ಸಮಿತಿಗಳು ಮಾನವೀಯತೆ ಮೆರೆದಂತೆ ಎಂದು ವೀರಾಜಪೇಟೆ ಡಿವ್ಯೆಎಸ್‍ಪಿ ನಾಗಪ್ಪ ಹೇಳಿದರು.
ವೀರಾಜಪೇಟೆ ಪುರಭವನದಲ್ಲಿ ‘ವೀರರಾಜೇಂದ್ರಪೇಟೆ ಐತಿಹಾಸಿಕ ಗೌರಿನಾಡ ಹಬ್ಬದ ಒಕ್ಕೂಟ’ದಿಂದ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದ ನಾಗಪ್ಪ ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ಜಿಲ್ಲೆಯ ಜನರು ಸಂಕಷ್ಟದಲ್ಲಿರುವಾಗ ನಾವು ಇಲ್ಲಿ ವಿಜೃಂಭಣೆ, ಆಡಂಬರ, ಅತಿ ಅದ್ದೂರಿಯಿಂದ ಗೌರಿಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬಾರದು. ಗೌರಿ ಗಣೇಶ ವಿಸರ್ಜನೋತ್ಸವ ದಿನದಂದು ಯಾವದೇ ಆಡಂಬರಕ್ಕೆ ಅವಕಾಶ ನೀಡಿ ಕುಣಿದು ಕುಪ್ಪಳಿಸುವದು ಸರಿಯಲ್ಲ. ಆಸ್ತಿ ಪಾಸ್ತಿ ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿರುವವರ ಕಷ್ಟಗಳಿಗೆ ನಾವು ಕೂಡ ನೇರವಾಗಿ ಸ್ಪಂದಿಸುವಂತಾಗಬೇಕು. ವಿಸರ್ಜನೋತ್ಸವದಂದು ಇಲಾಖೆಯ ವತಿಯಿಂದ ಎಲ್ಲಾ ರೀತಿಯ ಪೊಲೀಸ್ ಬಂದೋಬಸ್ತ್‍ಗಳನ್ನು ಕೈಗೊಳ್ಳಲಾಗುವದು. ಸಾರ್ವಜನಿಕರು ಇಲಾಖೆಯೊಂದಗೆ ಸಹಕರಿಸಬೇಕು ಎಂದು ಹೇಳಿದರು.
ಚೆಸ್ಕಾಂನ ಸಹಾಯಕ ಕಾರ್ಯಪಾಲ ಅಭಿಯಂತರ ಸುರೇಶ್ ಮಾತನಾಡಿ ಗೌರಿ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಕೆಲವೊಂದು ಕಡೆಗಳಲ್ಲಿ ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡಲಾಗಿದೆ. ಅಗತ್ಯ ಇರುವ ಕಡೆಗಳಲ್ಲಿ ಇನ್ನು ಕೆಲವು ಮಾರ್ಪಾಡುಗಳನ್ನು ತಕ್ಷಣ ಮಾಡಿಕೊಡಲಾಗುವದು. ಜನರ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವದು ಎಂದು ಹೇಳಿದರು.
ಸಭೆಯಲ್ಲಿ ವಕೀಲ ಟಿ.ಪಿ. ಕೃಷ್ಣ ಮಾತನಾಡಿ, ಪಟ್ಟಣದ ಬಹುತೇಕ ರಸ್ತೆಗಳು ದುರಸ್ಥಿಗೀಡಾಗಿದ್ದು ಪಟ್ಟಣ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆ ಕೂಡಲೆ ಕಾರ್ಯಪ್ರವೃತ್ತರಾಗಿ ಶೋಭಾಯಾತ್ರೆಗೆ ಯಾವದೇ ಅಡಚಣೆ ಬಾರದ ರೀತಿಯಲ್ಲಿ ಸಹಕರಿಸುವಂತೆ ಕೋರಿದರು. ಜಿಲ್ಲೆಯ ಒಂದು ಭಾಗ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವದರಿಂದ ವಿಜೃಂಭಣೆ ಇಲ್ಲದೆ ಸರಳ ರೀತಿಯಲ್ಲಿ ಆಚರಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ 21 ಉತ್ಸವ ಸಮಿತಿಗಳ ಪ್ರತಿನಿಧಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ವೀರರಾಜೇಂದ್ರಪೇಟೆ ಐತಿಹಾಸಿಕ ಗೌರಿನಾಡ ಹಬ್ಬದ ಒಕ್ಕೂಟದ ಅಧ್ಯಕ್ಷ ಬಿ.ಜಿ. ಸಾಯಿನಾಥ್, ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್, ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ, ಮತ್ತಿತರರು ಉಪಸ್ಥಿತರಿದ್ದರು.