ಪೊನ್ನಂಪೇಟೆ, ಸೆ. 5 : ಕೊಡಗಿನಲ್ಲಿ ಕಳೆದ ತಿಂಗಳು ಸಂಭವಿಸಿದ ಪ್ರಕೃತಿಯ ‘ಮಹಾ ದುರಂತ’ದ ಛಾಯೆ ಜಿಲ್ಲೆಯಾದ್ಯಂತ ಪಸರಿಸಿದೆ. ಜಿಲ್ಲೆಯ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸುವಂತೆ ಪ್ರಕೃತಿಯ ಮಹಾ ದುರಂತ ಘಟಿಸಿದ್ದರಿಂದ ವೀರಾಜಪೇಟೆ ತಾಲೂಕಿನಲ್ಲಿ ಉಂಟಾದ ದುರಂತದ ಕಪ್ಪುಛಾಯೆ ಹೆಚ್ಚಿನ ಸುದ್ದಿಯಾಗಲಿಲ್ಲ. ಕಳೆದ ತಿಂಗಳು ವೀರಾಜಪೇಟೆ ತಾಲೂಕಿನಲ್ಲಿ ಸಂಭವಿಸಿದ ಪ್ರಕೃತಿ ದುರಂತಗಳು ಇದೀಗ ತಡವಾಗಿ ಬೆಳಕಿಗೆ ಬರುತ್ತಿದ್ದು, ವಾಸದ ಮನೆಯೊಂದು ಭೂಕುಸಿತಕ್ಕೆ ಸಿಲುಕಿ ಮಣ್ಣಿನಲ್ಲಿ ಮರೆಯಾದ ಘೋರ ಘಟನೆ ವೀರಾಜಪೇಟೆ ಸಮೀಪದ ಅಂಬಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಮನೆಯಲ್ಲಿ ವಾಸಿಸುತಿದ್ದ ಇಡೀ ಕುಟುಂಬ ಇದೀಗ ಸಮೀಪದಲ್ಲಿರುವ ಸಂಬಂಧಿಕರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದೆ. ಬೆಟ್ಟದ ತಪಲಿನಲ್ಲಿರುವ ಅಂಬಟ್ಟಿ ಗ್ರಾಮದ ಹಲವೆಡೆ ಭೂಕುಸಿತ ಉಂಟಾಗಿದ್ದು, ವ್ಯಾಪಕವಾದ ನಾಶ-ನಷ್ಟ ಉಂಟಾಗಿದೆ.
ಕಳೆದ ತಿಂಗಳ 16 ರಂದು ಈ ಭಾಗಕ್ಕೆ ಸುರಿದಿದ್ದ ಮಹಾ ಮಳೆಯ ಸಂದರ್ಭದಲ್ಲಿ ಅಂಬಟ್ಟಿ ಗ್ರಾಮದ ಕಿಕ್ಕರೆರ ಷರೀಫ್ ಅವರ ಮನೆ ಮುಂದೆ ದಿಢೀರನೇ ತೀವ್ರ ರೀತಿಯ ಭೂಕುಸಿತ ಸಂಭವಿಸಿದೆ. ಈ ವೇಳೆ ಒಂದು ದಿನ ಮೊದಲು ಸಂಭವಿಸಿದ್ದ ಭೂಕುಸಿತದಿಂದಾಗಿ ನೆಲಕಚ್ಚಿದ್ದ ಷರೀಫ್ ಅವರ ಕೊಟ್ಟಿಗೆಯನ್ನು ಸರಿಪಡಿಸುವಲ್ಲಿ ಮನೆಯವರು ನಿರತರಾಗಿದ್ದರು ಎನ್ನಲಾಗಿದೆ. ಭಾರಿ ಶಬ್ದದೊಂದಿಗೆ ಉಂಟಾದ ಭೂಕುಸಿತವನ್ನು ಮನೆಯವರು ಹೊರಗೆ ನಿಂತು ನೋಡುತ್ತಿದ್ದಂತೆ ಮುಂಭಾಗದಲ್ಲಿದ್ದ ಮಣ್ಣು ಪೂರ್ಣವಾಗಿ ಮನೆಯನ್ನು ಆವರಿಸಿಕೊಂಡಿತು ಎಂದು ಮನೆ ಮಾಲೀಕ ಷರೀಫ್ ಅವರು ‘ಶಕ್ತಿ’ಯೊಂದಿಗೆ ವಿವರಿಸಿದರು. ಮಣ್ಣು ಮತ್ತು ಕೆಸರು ಮಿಶ್ರಿತ ನೀರು ರಭಸದಿಂದ ಮನೆಯ ಭಾಗಕ್ಕೆ ಪ್ರವೇಶಿಸತೊಡಗಿತು. ಭಾರಿ ಭೂಕುಸಿತದಿಂದಾಗಿ ಮನೆಯ ಒಂದು ಭಾಗದ ಗೋಡೆ ಸಂಪೂರ್ಣ ನೆಲಕಚ್ಚಿದಾಗ ಇಡೀ ಮನೆಯನ್ನು ಮಣ್ಣು ಅತಿಕ್ರಮಿಸಿಕೊಂಡಿತು ಎಂದು ಅವರು ವಿವರಿಸಿದ್ದಾರೆ.
ಹಗಲು ವೇಳೆ ಈ ದುರ್ಘಟನೆ ಸಂಭವಿಸಿದ್ದರಿಂದ ಮತ್ತು ಮನೆಯವರೆಲ್ಲರು ಹೊರಭಾಗದಲ್ಲಿ ಕೆಲಸನಿರತರಾದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳೆಲ್ಲಾ ಮಣ್ಣಿನಡಿ ಸಿಲುಕಿಕೊಂಡಿದೆ. ಇದರಿಂದಾಗಿ ಇದೀಗ ಮಣ್ಣು ತೆಗೆದರೂ ಈ ಮನೆ ವಾಸಕ್ಕೆ ಯೋಗ್ಯವಲ್ಲದಂತಾಗಿದೆ. ಆದರೆ ಮನೆಯೊಳಗೆ ಮತ್ತು ಆವರಣದಲ್ಲಿ ಭಾರಿ ಪ್ರಮಾಣದಲ್ಲಿರುವ ಮಣ್ಣನ್ನು ತೆರವುಗೊಳಿಸುವುದು ಭಾರೀ ವೆಚ್ಚದ ಕೆಲಸ ಎನ್ನಲಾಗುತ್ತಿದೆ. ಘಟನೆ ಸಂಭವಿಸುತ್ತಿದ್ದಂತೆ ಎಚ್ಚೆತ್ತುಕೊಂಡ ನೆರೆಕರೆಯವರು ಮತ್ತು ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಧಾವಿಸಿ ಷರೀಫ್ ಅವರ ಕುಟುಂಬವನ್ನು ಸಮೀಪದ ಸಂಬಂಧಿಕರೊಬ್ಬರ ಮನೆಗೆ ಸ್ಥಳಾಂತರಿಸಿದರು. ಆದರೆ ಮನೆಯ ವಸ್ತುಗಳೆಲ್ಲಾ ಮಣ್ಣಿನ ಕೆಳಭಾಗದಲ್ಲಿದ್ದರಿಂದ ಅವುಗಳನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಷರೀಫ್ ಅವರಿಗೆ ಲಕ್ಷಾಂತರ ಮೊತ್ತದ ನಷ್ಟವುಂಟಾಗಿದೆ ಎಂದು ಹೇಳಲಾಗಿದೆ.
ಷರೀಫ್ ಅವರ ಮನೆಯ ಸಮೀಪದಲ್ಲೇ ಗ್ರಾಮದ ಕೂವಲೆರ ಖದೀಜ ಎಂಬುವರು ಮನೆ ನಿರ್ಮಾಣಕ್ಕಾಗಿ ಸಮತಟ್ಟುಗೊಳಿಸಲಾಗಿದ್ದ ನಿವೇಶನ ಪೂರ್ಣವಾಗಿ ಭೂಕುಸಿತಕ್ಕೆ ಒಳಗಾಗಿದೆ. ಅದ್ದರಿಂದ ಇಲ್ಲಿ ಮನೆ ನಿರ್ಮಾಣ ಸಾದ್ಯವಿಲ್ಲದಂತಾಗಿದೆ. ಘಟನೆ ನಡೆದ ನಂತರ ಗ್ರಾಮ ಲೆಕ್ಕಾಧಿಕಾರಿ ಮತ್ತು ಬಿಟ್ಟಂಗಾಲ ಗ್ರಾ. ಪಂ. ಪಿ.ಡಿ.ಓ. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಘೋರ ದುರಂತ ನಡೆದಿದ್ದರೂ ಯಾವುದೇ ಜನಪ್ರತಿನಿಧಿಗಳಾಗಲಿ, ತಹಶೀಲ್ದಾರ್ ಆಗಲಿ ಇದುವರೆಗೂ ಭೇಟಿ ನೀಡದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
1961ರಲ್ಲಿ ಸಂಭವಿಸಿದ್ದ ಪ್ರಕೃತಿ ದುರಂತದಲ್ಲಿಯೂ ಅಂಬಟ್ಟಿ ಗ್ರಾಮ ಪೂರ್ಣವಾಗಿ ತತ್ತರಿಸಿತ್ತು. ಅದಾದ 57 ವರ್ಷಗಳ ನಂತರ ಮತ್ತೊಮ್ಮೆ ಅಂಬಟ್ಟಿ ಗ್ರಾಮ ಪ್ರಕೃತಿ ವಿಕೋಪವನ್ನು ಎದುರಿಸಿದೆ ಎಂದು ಹಿಂದಿನ ತಲೆಮಾರಿನವರ ಹೇಳಿಕೆಯನ್ನು ಉಲ್ಲೇಖಿಸಿ ‘ಶಕ್ತಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿರುವ ಗ್ರಾಮದ ನಿವೃತ್ತ ಯೋಧ ಕರ್ತೊರೆರ ಕೆ. ಮುಸ್ತಫಾ ಹೇಳಿದರು. ಗ್ರಾಮದ ಹಿರಿಯರ ಪ್ರಕಾರ 1961ರಲ್ಲಿ ಸುರಿದ ಮಹಾಮಳೆಯನ್ನೆ ನೆನಪಿಸುವಂತೆ ಈ ಭಾರಿ ಮಹಾಮಳೆ ಸುರಿದಿದೆ. ಗ್ರಾಮದಲ್ಲಿ ಹಿಂದೆಂದೂ ಕಾಣದಿದ್ದ ಜಾಗಗಳಲ್ಲೂ ಜಲ ಹುಟ್ಟಿಕೊಂಡು ತೊರೆಗಳಂತೆ ಹರಿದಿದೆ. ಸೋಮವಾರದಂದು ದುದ್ದಿಯಂಡ ಹೆಚ್. ಮೊಯಿದು ಹಾಜಿ ಅವರ ನೇತೃತ್ವದಲ್ಲಿ ಗ್ರಾಮಕ್ಕೆ ತೆರಳಿದ ಕೆ.ಎಂ.ಎ. ತಂಡ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿತು.
ವರದಿ : ರಫೀಕ್ ತೂಚಮಕೇರಿ