ವರದಿ-ಚಂದ್ರಮೋಹನ್

ಕುಶಾಲನಗರ, ಸೆ. 5: ಮಳೆ ಸಂತ್ರಸ್ತರಿಗೆ ದಾನಿಗಳಿಂದ ಬಂದ ಪರಿಹಾರ ಸಾಮಗ್ರಿಗಳ ರಕ್ಷಣೆ ಹೆಸರಿನಲ್ಲಿ ಸರಕಾರಿ ಶಾಲೆಯೊಂದರ ಮಕ್ಕಳು ತರಗತಿಗೆ ತೆರಳಲು ಬೀಗ ಜಡಿದ ಗೇಟ್ ಮುಂದೆ ಕಾಯಬೇಕಾದ ಪರಿಸ್ಥಿತಿ ಇಲ್ಲಿಗೆ ಸಮೀಪದ ಕೊಪ್ಪ ಸರಕಾರಿ ಶಾಲೆಯಲ್ಲಿ ಕಂಡುಬಂದಿದೆ.

ಕೊಪ್ಪ ಗ್ರಾಮದ ಮುಖ್ಯರಸ್ತೆ ಬದಿಯಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನದಿ ಪ್ರವಾಹದಿಂದ ಸಂತ್ರಸ್ತರಾದವರಿಗೆ ಶಾಲೆಯ ಆವರಣದಲ್ಲಿ ಸಾಂತ್ವನ ಕೇಂದ್ರ ತೆರೆಯಲಾಗಿತ್ತು. ಸಂತ್ರಸ್ತರು ಮನೆಗೆ ತೆರಳಿದ ನಂತರ ಸಾಂತ್ವನ ಕೇಂದ್ರದಲ್ಲಿ ಭಾರೀ ಪ್ರಮಾಣದ ಹೆಚ್ಚುವರಿ ಪರಿಹಾರ ಸಾಮಗ್ರಿಗಳು ಉಳಿದಿದ್ದು ಇದನ್ನು ಸಂತ್ರಸ್ತರಿಗೆ ತಲಪಿಸದೆ ಸಂಬಂಧಿಸಿದ ಅಧಿಕಾರಿಗಳು ಶಾಲೆಯಲ್ಲಿ ಉಳಿಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.

ಶಾಲೆಯಲ್ಲಿ ಸಂಗ್ರಹಿಸಲಾಗಿರುವ ಸಾಮಗ್ರಿಗಳನ್ನು ಕಳವು ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಗೇಟ್‍ಗೆ ಬೀಗ ಜಡಿದಿರುವ ಅಧಿಕಾರಿಗಳು ಬೆಳಗ್ಗೆ ಶಾಲೆ ಪ್ರಾರಂಭವಾಗುವ ಸಮಯವಾದರೂ ಗೇಟ್ ಬೀಗ ತೆರೆಯದೆ ಪುಟ್ಟ ಮಕ್ಕಳು ತಮ್ಮ ಬ್ಯಾಗ್‍ನೊಂದಿಗೆ ಗೇಟ್ ಬಳಿ ರಸ್ತೆಯಲ್ಲಿ ಕಾಯುತ್ತಿದ್ದ ದೃಶ್ಯ ಕಂಡುಬಂದಿದೆ.

ತಕ್ಷಣ ಸಂಬಂಧಿಸಿದ ಅಧಿಕಾರಿಗಳು, ಶಾಲೆಯ ಮುಖ್ಯಸ್ಥರು ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಪುಟ್ಟ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದು ಮಕ್ಕಳ ಪೋಷಕರು ದೂರಿದ್ದಾರೆ.