ಮಡಿಕೇರಿ, ಸೆ. 5: ಸಂತ್ರಸ್ತರಿಗೆ ಮನೆ ನಿರ್ಮಿಸುವ ಮೊದಲು ಗುರುತಿಸಿರುವ ಸ್ಥಳ ವಾಸಕ್ಕೆ ಯೋಗ್ಯವೇ ಎಂಬ ಕುರಿತು ಭೂವಿಜ್ಞಾನಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮಕೈಗೊಳ್ಳುವದಾಗಿ ತಹಶೀಲ್ದಾರ್ ಕುಸುಮ ತಿಳಿಸಿದರು.

ಮಡಿಕೇರಿ ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಹಶೀಲ್ದಾರ್ ಈ ಕುರಿತು ವಿವರಣೆಯಿತ್ತರು.

ಮಡಿಕೇರಿ ತಾಲೂಕಿನಲ್ಲಿ ಮನೆ ಕಳೆದುಕೊಂಡವರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಮನೆ ಪೂರ್ಣಹಾನಿಯಾಗಿರುವವರಿಗೆ ಹಾಗೂ ಭಾಗಶಃ ಹಾನಿಯಾಗಿರುವವರೆಗೆ ಮನೆ ಕಟ್ಟಿಕೊಡುವ ಬಗ್ಗೆ ಜಿಲ್ಲಾಡಳಿತ ಚರ್ಚೆ ನಡೆಸುತ್ತಿದೆ. ಸಂತ್ರಸ್ತರಿಗೆ ಅವರದೇ ಜಾಗದಲ್ಲಿ ಮನೆ ಕಟ್ಟಲು ಅವಕಾಶವಿದೆ. ಇಲ್ಲದಿದ್ದ ಪಕ್ಷದಲ್ಲಿ ಸರಕಾರವೇ ಮನೆಯನ್ನು ಇತರೆ ಸ್ಥಳದಲ್ಲಿ ಕಟ್ಟಿಕೊಡಲಿದೆ. ಈ ಬಗ್ಗೆ ಜಿಲ್ಲಾಡಳಿತ ಸಂತ್ರಸ್ತರೊಂದಿಗೆ ಚರ್ಚೆ ನಡೆಸುತ್ತಿದೆ.

ಬಿಳಿಗೇರಿ, ಕರ್ಣಂಗೇರಿಯಲ್ಲಿ ಜಾಗ ಗುರುತಿಸಲಾಗಿದೆ. ಮಡಿಕೇರಿ ತಾಲೂಕಿನಲ್ಲಿ ಮನೆ ಕಳೆದುಕೊಂಡವರಿಗೆ 10 ಏಕರೆ ಒಳಗೆ ಇರುವ ಪ್ರದೇಶದಲ್ಲಿ ಜಾಗ ಗುರುತಿಸಲು ಶ್ರಮಿಸಲಾಗುತ್ತಿದೆ. ಸೋಮವಾರಪೇಟೆ ವ್ಯಾಪ್ತಿಯಲ್ಲಿ ಜಾಗವಿದೆ. ಆದರೆ ಇಲ್ಲಿನ ಸಂತ್ರಸ್ತರು ಅಷ್ಟು ದೂರ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಮಡಿಕೇರಿಯಲ್ಲಿ ಜಾಗದ ಸಮಸ್ಯೆ ಇದೆ ಎಂದರು.

ಕೊಡಗಿನಲ್ಲಿ ಉಂಟಾದ ಭೂಕೂಸಿತದಿಂದ ಮನೆ, ಆಸ್ತಿ ಕಳೆದುಕೊಂಡವರ ಸಾಲ ಮನ್ನಾ ಮಾಡಬೇಕು, ರೈತರ ಸಾಲ ಮನ್ನಾ ಮಾಡಲು ಸೂಕ್ತ ಕ್ರಮ ವಹಿಸಬೇಕು, ಮನೆ ನಿರ್ಮಿಸುವ ಕುರಿತು ಸಂತ್ರಸ್ತರಿಗೆ ಜಿಲ್ಲಾಡಳಿತ ಸೂಕ್ತ ಮಾಹಿತಿ ನೀಡಬೇಕು. ಕರಪತ್ರದ ಮೂಲಕ ಸಂತ್ರಸ್ತರಿಗೆ ಮಾಹಿತಿ ಹಂಚಬೇಕು ಎಂದು ಕುಂದಲ್ಪಾಡಿ ಸಭೆಯಲ್ಲಿ ಆಗ್ರಹಿಸಿದರು.

ಪ್ರಕೃತಿ ವಿಕೋಪದಿಂದ 2100 ಹೆಕ್ಟೇರ್ ಪ್ರದೇಶದಲ್ಲಿ ಕಾಳು ಮೆಣಸು, 740 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ, 155 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಹಾಗೂ 35 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ನಾಶವಾಗಿದೆ. ಕೇಂದ್ರ ಸರ್ಕಾರದ ಎನ್‍ಡಿಆರ್‍ಎಫ್ ಗೈಡ್ ಲೈನ್ಸ್ ಪ್ರಕಾರ ಸಂತ್ರಸ್ತರಿಗೆ ಪರಿಹಾರ ನೀಡಲಾಗುವದು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.

ಕೊಡಗಿನ ಹಲವು ಭಾಗದಲ್ಲಿ ಕೂಲಿ ಕಾರ್ಮಿಕರು ಕೆಲಸವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ದಬ್ಬಡ್ಕ ಶ್ರೀಧರ್ ಒತ್ತಾಯಿಸಿದರು.

ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಪ್ರಕೃತಿ ವಿಕೋಪದಿಂದ ಸಂಭವಿಸಿ ಉಂಟಾದ ಹಾನಿ ಹಾಗೂ ಮುಂಜಾಗ್ರತೆ ಬಗ್ಗೆ ಮಾಹಿತಿ ಪಡೆಯಲಾಯಿತು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಿ.ಲಕ್ಷ್ಮಿ, ಉಪಾಧ್ಯಕ್ಷ ಸಂತು ಸುಬ್ರಮಣಿ, ಸ್ಥಾಯಿ ಸಮಿತಿ ಸದಸ್ಯ ಕೊಡಪಾಲು ಗಣಪತಿ, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಹಾಜರಿದ್ದರು.