ಸೋಮವಾರಪೇಟೆ, ಸೆ. 6: ತಾಲೂಕಿನಲ್ಲಿ ಕೆಲವು ಮೈಕ್ರೋ ಫೈನಾನ್ಸ್ ಸಂಸ್ಥೆಯವರು ಸಾಲ ಮರುಪಾವತಿಗಾಗಿ ಮಾನಸಿಕ ಹಿಂಸೆಯೊಂದಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ನಂದಿಗುಂದ ಗ್ರಾಮ ವ್ಯಾಪ್ತಿಯ ಕಾರ್ಮಿಕರು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶನಿವಾರಸಂತೆ ಸಂಘದ ಅಧ್ಯಕ್ಷ ವಾಸುದೇವ ಅವರು, ಕೂಲಿ ಕೆಲಸವಿಲ್ಲದೆ ತಿಂಗಳುಗಳೇ ಕಳೆದಿವೆ. ತಿನ್ನಲು ಅನ್ನಕ್ಕಾಗಿ ಪರದಾಡುತ್ತಿದ್ದೇವೆ. ಇನ್ನು ಸಾಲವನ್ನು ಎಲ್ಲಿಂದ ಕಟ್ಟುವದು? ಆದರೂ ಸಾಲ ಮರುಪಾವತಿ ಮಾಡುವಂತೆ ಬಡ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಧಾರಾಕಾರ ಮಳೆಯಿಂದ ಫಸಲು ನಷ್ಟವಾಗಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈಗ ಕೂಲಿ ಕೆಲಸ ಕೊಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಸದ್ಯಕ್ಕೆ ಸಾಲ ಮರುಪಾವತಿ ಮಾಡಲು ಸಾಧ್ಯವಿಲ್ಲ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಎಸ್.ಎಸ್. ಮೈಕ್ರೊ ಫೈನಾನ್ಸ್, ಗ್ರಾಮೀಣ ಕೂಟ ಫೈನಾನ್ಸಿಯಲ್ ಸರ್ವಿಸ್, ಎಸ್.ಕೆ.ಎಸ್. ಸಂಸ್ಥೆಯವರು ಸಾಲ ಮರುಪಾವತಿಗೆ ಕಾರ್ಮಿಕರನ್ನು ಒತ್ತಾಯಿಸುವದನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಅರೆಸೇನಾ ಪಡೆಯ ಸಂಘದ ಜಿಲ್ಲಾಧ್ಯಕ್ಷ ಎಂ.ಜಿ. ಯತೀಶ್ ಮಾತನಾಡಿ, ಈಗಾಗಲೇ ರೈತರು ಹಾಗೂ ಕೃಷಿ ಕಾರ್ಮಿಕರು ಜೀವನ ನಿರ್ವಹಣೆಗಾಗಿ ವಾರದ ಕಂತಿನ ಆಧಾರದ ಮೇಲೆ ಸಾಲವನ್ನು ಪಡೆದಿದ್ದಾರೆ. ಆದರೆ, ಈಗ ಸಾಲ ಮರುಪಾವತಿಸಲು ಕಷ್ಟವಾಗಿದೆ. ಎಲ್ಲರೂ ಸಾಲ ಮರುಪಾವತಿ ಮಾಡಲು ಸಿದ್ದರಿದ್ದು, ಕೆಲ ತಿಂಗಳ ಸಮಯ ಬೇಕಾಗಿದೆ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಕಾರ್ಮಿಕರನ್ನು ರಕ್ಷಣೆ ಮಾಡಬೇಕು ಎಂದರು.
ಗೋಷ್ಠಿಯಲ್ಲಿ ಗೌಡÀಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಧರ್ಮಾಚಾರಿ, ಸಂಘದ ಒಕ್ಕೂಟದ ಪದಾಧಿಕಾರಿಗಳಾದ ಸವಿತಾ, ಎಸ್.ವಿ. ದಿವಾಕರ ಉಪಸ್ಥಿತರಿದ್ದರು.