ವೀರಾಜಪೇಟೆ, ಸೆ. 6: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನೆಂಬ ಕಾರಣಕ್ಕಾಗಿ ಕಾರು ಚಾಲಕನನ್ನು ಕೊಲೆ ಮಾಡಿದ ಆರೋಪದ ಮೇರೆ ಕಳೆದ 2012ರಲ್ಲಿ ಜೀವಾವಧಿ ಕಠಿಣ ಶಿಕ್ಷೆಗೊಳಗಾಗಿದ್ದ ಅಂಗವಿಕಲ ಆರ್. ಮುರುಗನ್ (65) ಎಂಬಾತನಿಗೆ ಉಚ್ಚ ನ್ಯಾಯಾಲಯದ ಆದೇಶದಂತೆ ಕೊಲೆ ಪ್ರಕರಣದ ಮೇಲ್ಮನವಿಯ ಮರು ವಿಚಾರಣೆ ನಡೆಸಿದ ಇಲ್ಲಿನ ಅಪರ ಹಾಗೂ ಎರಡನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಜಿ. ರಮಾ ಅವರು ಕೊಲೆ ಆರೋಪದಿಂದ ಬಿಡುಗಡೆಗೊಳಿಸಿ ತೀರ್ಪು ನೀಡಿದ್ದಾರೆ.

ಕಳೆದ 21-2-2010ರಂದು ರಾತ್ರಿ 7-30 ರ ಸಮಯದಲ್ಲಿ ತಿತಿಮತಿಯ ರಾಜರಾಜೇಶ್ವರಿ ವಿದ್ಯಾನಿಕೇತನ್ ವಿದ್ಯಾರ್ಥಿ ನಿಲಯದಲ್ಲಿ ಗಾರ್ಡ್ ಹುದ್ದೆಯಲ್ಲಿದ್ದ ಮುರುಗನ್ ತನ್ನ ಎರಡನೇ ಪತ್ನಿ ಲೀಲಾ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನೆನ್ನಲಾಗಿದೆ. ಅದೇ ಊರಿನ ಕಾರು ಚಾಲಕ ಸುಧೀರ್ (40) ಎಂಬಾತನನ್ನು ಕತ್ತಿಯಿಂದ ಕಡಿದುದಲ್ಲದೆ ತಲೆ ಮೇಲೆ ಸೈಜು ಕಲ್ಲು ಹಾಕಿ ಕೊಲೆ ಮಾಡಿದ ಆರೋಪದ ಮೇರೆ ಶಿಕ್ಷೆಗೆ ಒಳಗಾಗಿದ್ದ. ವೀರಾಜಪೇಟೆಯಲ್ಲಿದ್ದ ಆಗಿನ ಫಾಸ್ಟ್ ಟ್ರಾಕ್ ನ್ಯಾಯಾಲಯದ ನ್ಯಾಯಾಧೀಶರಾದ ರಾಮಕೃಷ್ಣ ಅವರು ಆರೋಪಿಯ ಎರಡನೇ ಪತ್ನಿ ಲೀಲಾ ಸೇರಿದಂತೆ ಒಟ್ಟು 33 ಮಂದಿ ಸಾಕ್ಷಿದಾರರನ್ನು ವಿಚಾರಣೆ ನಡೆಸಿದ ನಂತರ ಮುರುಗನ್‍ಗೆ ಜೀವಾವಧಿ ಶಿಕ್ಷೆ ಹಾಗೂ ರೂ 10,000 ದಂಡ ವಿಧಿಸಿ ತೀರ್ಪು ನೀಡಿದ ನಂತರ ಆರೋಪಿ ಬಳ್ಳಾರಿಯ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದನು.

ಆರೋಪಿ ಮುರುಗನ್ ಕಾರಾಗೃಹದಲ್ಲಿದ್ದುಕೊಂಡು ಕಾನೂನು ಸೇವಾ ಸಮಿತಿಯ ಮೂಲಕ ಶಿಕ್ಷೆಯ ವಿರುದ್ಧ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದನು. ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿದ ನ್ಯಾಯಾಲಯ ಇಡೀ ಪ್ರಕರಣದ ವಿಚಾರಣೆಯೊಂದಿಗೆ ತೀರ್ಪನ್ನು ಮರು ಪರಿಶೀಲನೆ ನಡೆಸುವಂತೆ ವೀರಾಜಪೇಟೆ ಎರಡನೇ ಸೆಷನ್ಸ್ ನ್ಯಾಯಾಲಯಕ್ಕೆ ಆದೇಶಿಸಿತ್ತು.

2018ರ ಮೇ ತಿಂಗಳಲ್ಲಿ ಪ್ರಕರಣದ ಮರು ವಿಚಾರಣೆ ಆರಂಭಿಸಿದ ಅಪರ ಸೆಷನ್ಸ್ ನ್ಯಾಯಾಲಯ ಪತ್ನಿಯ ಅಕ್ರಮ ಸಂಬಂಧ ಹಾಗೂ ಕಾರು ಚಾಲಕನ ಕೊಲೆಯನ್ನು ಪ್ರಾಸಿಕ್ಯೂಷನ್ ಸಾಬೀತು ಪಡಿಸುವಲ್ಲಿ ವಿಫಲಗೊಂಡಿರು ವದರಿಂದ ಆರೋಪಿ ಮುರುಗನ್ ರೂ. 25000 ಸೆಲ್ಪ್ ಬಾಂಡ್ ಹಾಗೂ ವೈಯುಕ್ತಿಕ ಬೇರೆ ಜಾಮೀನು ನೀಡಿ ಬಿಡುಗಡೆಗೊಳಿಸುವಂತೆ ತೀರ್ಪಿನಲ್ಲಿ ಆದೇಶಿಸಿದೆ.

ನ್ಯಾಯಾಧೀಶರು ತಾ. 30.7.18 ರಂದು ಈ ತೀರ್ಪು ನೀಡಿದ್ದು ಮುರುಗನ್ ನ್ಯಾಯಾಲಯಕ್ಕೆ ರೂ25000 ಸೆಲ್ಪ್ ಬಾಂಡ್ ನೀಡಿದ್ದರೂ ಬೇರೆ ವೈಯುಕ್ತಿಕ ಜಾಮೀನು ದೊರೆಯದ್ದರಿಂದ ಇನ್ನು ಬಿಡುಗಡೆಯ ಭಾಗ್ಯ ದೊರೆಯದೆ ಮಡಿಕೇರಿಯ ಕರ್ಣಂಗೇರಿ ಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಇರುವಂತಾಗಿದೆ.

ವೀರಾಜಪೇಟೆ ಅಪರ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ಮರು ಪರಿಶೀಲನೆ ಸಂದರ್ಭ ಆರೋಪಿ ಪರ ವೀರಾಜಪೇಟೆ ತಾಲೂಕು ಕಾನೂನು ಸೇವಾ ಸಮಿತಿಯ ಪ್ಯಾನಲ್ ಅಡ್ವೊಕೇಟ್ ಕೆ.ಸಿ. ಪ್ರದ್ಯಮ್ನ ವಾದಿಸಿದರು.

ವೀರಾಜಪೇಟೆ ಸೆಷನ್ಸ್ ನ್ಯಾಯಾಲಯದಲ್ಲಿ ಕೊಲೆ ಪ್ರಕರಣದ ಮರು ವಿಚಾರಣೆ ಆರಂಭಿಸಿದಾಗ ಮುರುಗನ್‍ನ್ನು ಮಡಿಕೇರಿಯ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.