ಕೂಡಿಗೆ, ಸೆ. 6: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಪಕ್ಕದಲ್ಲಿ ಉದ್ಯಾನವನ ಕಾಮಗಾರಿಗೆ ಗ್ರಾ.ಪಂ. ಅಧ್ಯಕ್ಷೆ ಲತಾ ಚಾಲನೆ ನೀಡಿದರು.
ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಈ ಕಾಮಗಾರಿಗೆ ರೂ. 3 ಲಕ್ಷ ಕಾದಿರಿಸಿ ಪವಿತ್ರ ಕಾವೇರಿ ನದಿ ದಡದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಾಲಯದ ಮೇಲ್ಭಾಗದಲ್ಲಿರುವ ಗುಡ್ಡವು ಕಾಡುಮಯವಾಗಿತ್ತು. ಈ ಗುಡ್ಡವನ್ನು ಉದ್ಯಾನವನವನ್ನಾಗಿ ಪರಿವರ್ತಿಸಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಲತಾ ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಮಾತನಾಡಿ, ಜಿಲ್ಲೆಯಲ್ಲಿ ಕಣಿವೆ ಶ್ರೀ ರಾಮಲಿಂಗೇಶ್ವರ ರಥೋತ್ಸವವು ವಿಶೇಷವಾಗಿದ್ದು, ಈ ಸ್ಥಳಕ್ಕೆ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳ ಸಾವಿರಾರು ಭಕ್ತಾಧಿಗಳು ಹಾಗೂ ಪ್ರವಾಸಿಗರು ಬರುವ ಹಿನ್ನೆಲೆಯಲ್ಲಿ, ಈ ಗುಡ್ಡದಲ್ಲಿ ವೀರಾಂಜನೇಯ ಗುಡಿ ಮತ್ತು ವಿಶೇಷವಾಗಿ ಲಕ್ಷ್ಮಣೇಶ್ವರ ಸ್ವಾಮಿಯ ಗುಡಿಯು ಇರುವದರಿಂದ ಈ ಗುಡ್ಡವನ್ನು ಪ್ರವಾಸಿಗರಿಗೆ ಅನುಕೂಲವಾಗುವಂತೆ ಉದ್ಯಾನವನ ಕಾಮಗಾರಿ ನಡೆಸಲಾಗುತ್ತಿದೆ ಎಂದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್, ಶಿವನಂಜಪ್ಪ, ಮಂಜುಳಾ ಹಾಗೂ ಗ್ರಾಮಸ್ಥರು ಇದ್ದರು.