*ಗೋಣಿಕೊಪ್ಪಲು, ಸೆ. 5: ಮೂರು ದಿನಗಳಿಂದ ಸತತವಾಗಿ ಒಂದೇ ಸಮನೆ ಸುರಿಯುತ್ತಿದ್ದ ಮಳೆ.ಇದರ ರಭಸಕ್ಕೆ ಸುಮಾರು 60 ಅಡಿ ಎತ್ತರದ ಬೆಟ್ಟವೇ ಕುಸಿಯ ತೊಡಗಿತು. ಇದನ್ನು ಕಂಡು ಭಯಭೀತರಾಗಿ ಜೀವ ಉಳಿಸಿಕೊಳ್ಳಲು ಮೂರು ವರ್ಷದ ಕಂದಮ್ಮನ್ನು ಎತ್ತಿಕೊಂಡು ಸುಮಾರು 500 ಮೀಟರ್ ದೂರದಲ್ಲಿದ್ದ ಮತ್ತೊಬ್ಬರ ಮನೆಗೆ ಬಂದೆವು. ಅವರು ಕೂಡ ಬೆಟ್ಟ ಕುಸಿಯುತ್ತಿರುವದನ್ನು ಕಂಡು ಹೆದರಿ ನಮ್ಮನ್ನು ಕರೆದುಕೊಂಡು ಮನೆ ಖಾಲಿ ಮಾಡಿ ಮತ್ತೊಂದು ಮಾರ್ಗದಲ್ಲಿ ಬೆಟ್ಟ ಹತ್ತಿ ಹೊರ ಬಂದೆವು. ನಾವು ಬಂದ ಕೂಡಲೇ ಇಡೀ ಬೆಟ್ಟದ ನೀರು ಮನೆ ಮೇಲೆ ನುಗ್ಗಿ ಮನೆಯನ್ನು ನೆಲಸಮ ಮಾಡಿತು. ಮತ್ತೊಂದು ಮನೆ ಮೇಲೆ ಮಣ್ಣು ಬಂದು ಮನೆ ಕಾಣದಂತೆ ತುಂಬಿಕೊಂಡಿತು. ಬೆಟ್ಟ ಕುಸಿದು ದಾರಿ ಮುಚ್ಚಿ ಹೋದಾಗ ಮರಳಿ ಮನೆಗೆ ಹೋಗಲಾಗಲಿಲ್ಲ. ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿಯೇ ನೆನೆಯುತ್ತಾ ಕಾಡು ದಾರಿ ಹಿಡಿದು ಮಖ್ಯ ರಸ್ತೆಗೆ ಬಂದೆವು. ಅಲ್ಲಿ ವಾಹನ ಒಂದರಲ್ಲಿ ಬಂದವರು ನಮ್ಮನ್ನು ಇಲ್ಲಿಗೆ ಕರೆತಂದು ಜೀವ ಉಳಿಸಿದರು.
ಇದು ಮಡಿಕೇರಿಯ ಮೈತ್ರಿ ಪೊಲೀಸ್ ಭವನದ ಪರಿಹಾರ ಕೇಂದ್ರದಲ್ಲಿದ್ದ ಕಾಲೂರು ಗ್ರಾಮದ ಜೆ.ಇ. ಮೊಣ್ಣಪ್ಪ ಹಾಗೂ ಭವ್ಯ ಮೊಣ್ಣಪ್ಪ ಅವರ ನೋವಿನ ನುಡಿ. ಕಾಲೂರು ಕೊಡಗಿನ ಗಡಿಭಾಗ. ಪರ್ವತಗಳ ಕಮರಿನ ನೂರಾರು ಅಡಿ ಆಳದ ಕಂದರದಲ್ಲಿ ಈ ಗ್ರಾಮವಿದೆ. ಇಲ್ಲಿ ಸುಮಾರು 30 ಕುಟುಂಬಗಳಿವೆ. ಇವರೆಲ್ಲರೂ ತಮ್ಮ ತೋಟದಲ್ಲಿ ಮನೆ ಮಾಡಿಕೊಂಡಿದ್ದಾರೆ. ಒಂದು ಮನೆಗೂ ಮತ್ತೊಂದು ಮನೆಗೂ 400 ರಿಂದ 500 ಮೀಟರ್‍ನಷ್ಟು ದೂರವಿದೆ. ದಟ್ಟವಾದ ಗಿಡ-ಮರಗಳ ನಡುವಿನ ಪ್ರಪಾತದಲ್ಲಿ ಮನೆಗಳೇ ಗೋಚರಿಸುವದಿಲ್ಲ. ಇಂತಹ ಕಂದರದಲ್ಲಿ ವಾಸಮಾಡುತ್ತಿದ್ದ ಜನ ಈಗ ಮನೆ-ಮಠ, ಆಸ್ತಿ-ಪಾಸ್ತಿ ದನ-ಕರುಗಳನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.
ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಪೊನ್ನಂಪೇಟೆಯ ಎಂ.ಎಸ್. ಕುಶಾಲಪ್ಪ, ಹಿರಿಯರಾದ ಕಾಟಿಮಾಡ ಜಿಮ್ಮಿ ಅಣಕ್ಣೊಯ್ಯ, ಹಿರಿಯ ನ್ಯಾಯವಾದಿ ಮತ್ರಂಡ ಅಪ್ಪಚ್ಚು ಅವರೊಂದಿಗೆ ಮಾತನಾಡಿದ ಜೆ.ಇ. ಮೊಣ್ಣಪ್ಪ ಮನೆಯಿಂದ ಓಡಿ ಬರುವಾಗ ಕೊಟ್ಟಿಗೆಯಲ್ಲಿದ್ದ ದನ-ಕರುಗಳನ್ನು ಬಿಚ್ಚಿ ಬರಲಿಲ್ಲ. ಅವೆಲ್ಲ ಮೂರು ದಿನಗಳಿಂದ ನೀರು ಮೇವು ಇಲ್ಲದೆ ನರಳುತ್ತಿದ್ದವು. ಇದೀಗ ಪೊಲೀಸರ ಅನುಮತಿ ಪಡೆದು ಮನೆಗೆ ಹೋಗಿ ಅವುಗಳಿಗೆ ಹುಲ್ಲು ಹಾಕಿ ಬಂದಿದ್ದೇನೆ. ಕೊಟ್ಟಿಗೆ ಬೀಳುವ ಹಂತದಲ್ಲಿದೆ. ಏನು ಅನಾಹುತ ಸಂಭವಿಸುತ್ತದೋ! ಎಂದು ನೋವು ತೋಡಿಕೊಂಡರು.
ಕಾಲೂರು ಗ್ರಾಮದ ರಸ್ತೆ ಸರಿಪಡಿಸಲು ಹತ್ತು ವರ್ಷಗಳೇ ಬೇಕಾಗಬಹುದು. ಅಲ್ಲಿಗೆ ರಸ್ತೆ ಮಾಡಲಾಗದ ರೀತಿಯಲ್ಲಿ ಬೃಹತ್ ಪ್ರಪಾತವಾಗಿದೆ. ಒಂದು ಕಡೆ ಗದ್ದೆಗಳು ಕೊಚ್ಚಿ ಹೋಗಿದ್ದರೆ ಮತ್ತೊಂದು ಕಡೆ ಬೆಟ್ಟದ ಮಣ್ಣು ಹತ್ತರಿಂದ ಹದಿನೈದು ಅಡಿಗಳಷ್ಟು ತುಂಬಿದೆ. ಬದುಕೇ ಮಣ್ಣು ಪಾಲಾಗಿದೆ. ಇನ್ನು ಅಲ್ಲಿಗೆ ಹೋಗಿ ಫಲವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಬೆಟ್ಟದ ಮೇಲಿರುವ ಡಾಂಬರು ರಸ್ತೆ ಮೇಲೆ ಕಾಲಿಟ್ಟರೆ ನೂರು ಅಡಿಗಳಷ್ಟು ಆಳಕ್ಕೆ ಹೂತು ಹೋಗುತ್ತೇವೆ. ಇಂತಹ ರಸ್ತೆ ಮೇಲೆ ಬೆಟ್ಟ ಕುಸಿದು ರಸ್ತೆಯ ಕುರುಹನ್ನೇ ಅಳಿಸಿ ಹಾಕಿದ್ದರೆ ಮತ್ತೊಂದು ಕಡೆ ರಸ್ತೆ ಕುಸಿದು ನೂರಾರು ಅಡಿಗಳಷ್ಟು ಕಂದಕವನ್ನು ಸೃಷ್ಟಿಮಾಡಿದೆ.
ಚಿತ್ರ ವರದಿ : ಎನ್.ಎನ್. ದಿನೇಶ್