ನಾಪೋಕ್ಲು, ಸೆ. 6: ಸಮೀಪದ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪ್ರೌಢಶಾಲಾ ವಿಭಾಗದ ವಲಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ನಾಪೋಕ್ಲು ವಲಯದ ಮರ್ಕಝ್ ಪಬ್ಲಿಕ್ ಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು, ಶ್ರೀ ರಾಮಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ, ಸೇಕ್ರೆಡ್ ಹಾರ್ಟ್ ಆಂಗ್ಲಮಾಧ್ಯಮ ಶಾಲೆ, ಎಮ್ಮೆಮಾಡು ಗ್ರಾಮದ ಎಮ್ಮೆಮಾಡು ಸರ್ಕಾರಿ ಪ್ರೌಢಶಾಲೆ, ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆ, ಕಕ್ಕಬೆ ಪ್ರೌಢಶಾಲೆ, ಚೆಯ್ಯಂಡಾಣೆಯ ನರಿಯಂದಡ ಪ್ರೌಢಶಾಲೆ, ಕಡಂಗ ಪ್ರೌಢಶಾಲೆ ಹಾಗೂ ಪಾರಾಣೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಾಲಕರ ವಿಭಾಗದ ಕಬಡ್ಡಿ, ಫುಟ್‍ಬಾಲ್, ವಾಲಿಬಾಲ್ ಸ್ಪರ್ಧೆಗಳು ಜರುಗಿದವು. ಬಾಲಕಿಯರ ವಿಭಾಗದಲ್ಲಿ ಕಬಡ್ಡಿ ಹಾಗೂ ವಾಲಿಬಾಲ್ ಸ್ಪರ್ಧೆಗಳು ಜರುಗಿದವು.
ಪ್ರೌಢಶಾಲಾ ವಿಭಾಗದ ಬಾಲಕರ ಕಬಡ್ಡಿ ಸ್ಪರ್ಧೆಯಲ್ಲಿ ಮರ್ಕಝ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಜಯಗಳಿಸಿದರು. ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನಗಳಿಸಿದರು. ಫುಟ್‍ಬಾಲ್ ಸ್ಪರ್ಧೆಯಲ್ಲಿ ಮರ್ಕಝ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಗೆಲುವು ಸಾಧಿಸಿದರೆ ಕಡಂಗ ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನಗಳಿಸಿದರು. ವಾಲಿಬಾಲ್ ಸ್ಪರ್ಧೆಯಲ್ಲಿ ನಾಪೋಕ್ಲುವಿನ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಗೆಲುವು ಸಾಧಿಸಿದರು. ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು.
ಬಾಲಕಿಯರ ವಿಭಾಗದಲ್ಲಿ ಕಬಡ್ಡಿ ಸ್ಪರ್ಧೆಯಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಜಯಗಳಿಸಿದರು. ಪಾರಾಣೆ ಪ್ರೌಢಶಾಲೆಯ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದರು. ವಾಲಿಬಾಲ್ ಸ್ಪರ್ಧೆಯಲ್ಲಿ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಜಯಗಳಿಸಿದರೆ ದ್ವಿತೀಯ ಸ್ಥಾನವನ್ನು ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ಪಡೆದರು.