ಸೋಮವಾರಪೇಟೆ, ಸೆ. 5: ಮಹಾಮಳೆಯಿಂದ ಸಂತ್ರಸ್ತರಾಗಿ ಗ್ರಾಮವನ್ನೇ ತೊರೆದು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು, ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಪಿಡಿಓ ಸೇರಿದಂತೆ ಸಿಬ್ಬಂದಿಗಳಿಗೆ ದಿಗ್ಬಂಧನ ಹಾಕಿದ ಘಟನೆ ಇಂದು ನಡೆಯಿತು.ಭಾರೀ ಮಳೆಯಿಂದ ಮನೆ, ಆಸ್ತಿಪಾಸ್ತಿ, ಕೃಷಿಯನ್ನು ಕಳೆದುಕೊಂಡ ಗ್ರಾಮಸ್ಥರು ಊರು ಬಿಟ್ಟು ಹೋಗಿದ್ದೆವು. ಇದೀಗ ಗ್ರಾಮಕ್ಕೆ ವಾಪಸ್ ಆಗಮಿಸಿದ್ದು, ತೀವ್ರ ಸಂಕಷ್ಟದಲ್ಲಿದ್ದೇವೆ. ಆದರೂ ಗ್ರಾ.ಪಂ.ನಿಂದ ಯಾವದೇ ಸೌಲಭ್ಯ ವಿತರಣೆಯಾಗಿಲ್ಲ. ಶೇ. 20 ರಷ್ಟು ಮಂದಿಗೆ ಪರಿಹಾರ ವಿತರಿಸಿ, ಶೇ. 80 ರಷ್ಟು ಮಂದಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಗ್ರಾಮಸ್ಥ ಸಚಿನ್ ಆರೋಪಿಸಿದರು.ಪರಿಹಾರ ಕೇಳಲು ಗ್ರಾ.ಪಂ.ಗೆ ಆಗಮಿಸಿದ ಸಂದರ್ಭ ಅಭಿವೃದ್ಧಿ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡುತ್ತಿಲ್ಲ. ಸಂತ್ರಸ್ತರಾಗಿರುವ ಕುಟುಂಬಗಳಿಗೆ ತಲಾ 3800 ಪರಿಹಾರ ಹಣವನ್ನು ಸರ್ಕಾರ ನೀಡಿದ್ದರೂ, ನಮಗಳಿಗೆ ತಲಪಿಸಿಲ್ಲ. ಇದನ್ನು ಕೇಳಿದರೆ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪರಿಹಾರದ ಬಗ್ಗೆ ನಮಗೆ ಮಾಹಿತಿಯಿಲ್ಲ, ಸಂಬಂಧಿಸಿದ ಆಹಾರ ಇಲಾಖಾ ನಿರೀಕ್ಷಕರನ್ನು ಕೇಳಿ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದರಿಂದ ಅಸಮಾಧಾನಗೊಂಡ ಗ್ರಾಮಸ್ಥರು, ಪಿಡಿಓ ಗಣಪತಿ ಸೇರಿದಂತೆ ಸಿಬ್ಬಂದಿ ಗಳು ಕಚೇರಿ ಒಳಗಿರುವಂತೆಯೇ, ಕಚೇರಿಗೆ ಬೀಗ ಜಡಿದರು. ಪರಿಹಾರ ವಿತರಣೆಯ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು ಸ್ಥಳಕ್ಕಾಗಮಿಸುವ ವರೆಗೂ ಬೀಗ ತೆರೆಯುವದಿಲ್ಲ ಎಂದು ಪಟ್ಟು ಹಿಡಿದು ಕಚೇರಿಯ ಮುಂಭಾಗ ಧರಣಿ ಕುಳಿತರು.
(ಮೊದಲ ಪುಟದಿಂದ) ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರೀ ನಷ್ಟವಾಗಿದ್ದು, ಗ್ರಾಮಸ್ಥರು ಇನ್ನಿಲ್ಲದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಊಟಕ್ಕೂ ಸಹ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ ಸರ್ಕಾರ ಮಾತ್ರ ಈ ಗ್ರಾ.ಪಂ. ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಕೊಡಗಿನಲ್ಲಿ ಗರ್ವಾಲೆ ಎಂಬ ಗ್ರಾ.ಪಂ. ಇದೆಯೋ ಇಲ್ಲವೋ ಎಂಬ ಬಗ್ಗೆಯೇ ಅಧಿಕಾರಿಗಳಿಗೆ ಮಾಹಿತಿ ಇಲ್ಲವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾ.ಪಂ. ವ್ಯಾಪ್ತಿಯಲ್ಲಿ 500ಕ್ಕೂ ಅಧಿಕ ಪಡಿತರ ಚೀಟಿದಾರರಿದ್ದು, ಸರ್ಕಾರದಿಂದ ಕೇವಲ 173 ಪರಿಹಾರದ ಕಿಟ್‍ಗಳನ್ನು ವಿತರಿಸಲಾಗಿದೆ. ಸೀಮೆಎಣ್ಣೆಯ ಖಾಲಿ ಡಬ್ಬಗಳನ್ನು ಪಂಚಾಯಿತಿಯಲ್ಲಿ ಇಟ್ಟುಕೊಂಡಿದ್ದು, ಸೀಮೆ ಎಣ್ಣೆ ವಿತರಿಸಿಲ್ಲ. ಕೆಲವು ಕಿಟ್‍ಗಳನ್ನು ಪಂಚಾಯಿತಿಯ ಗೋದಾಮಿನಲ್ಲಿ ಉಳಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರಾದ ಸಚಿನ್, ರಜಿ, ಬೆಳ್ಳಿಯಪ್ಪ, ರಘು, ಚಂಗಪ್ಪ, ಸತೀಶ್, ಅನಿತ, ಮಣಿ, ರಾಣಿ ಸೇರಿದಂತೆ ಇತರರು ಆರೋಪಿಸಿದರು.
ಸೂರ್ಲಬ್ಬಿಯಲ್ಲಿ 77, ಕುಂಬಾರ ಗಡಿಗೆಯಲ್ಲಿ 54, ಕಿಕ್ಕರಳ್ಳಿಯಲ್ಲಿ 31, ಮಂಕ್ಯ ಗ್ರಾಮದಲ್ಲಿ 33, ಶಿರಂಗಳ್ಳಿಯಲ್ಲಿ 85, ಕಿರುವಾಲೆಯಲ್ಲಿ 42, ಗರ್ವಾಲೆಯಲ್ಲಿ 149 ಸೇರಿದಂತೆ ಹೊಸ ಕಾರ್ಡ್‍ಗಳನ್ನು ನೀಡಲಾಗಿದೆ. ಆದರೆ ಸಮರ್ಪಕವಾಗಿ ಪರಿಹಾರ ವಿತರಣೆ ಆಗುತ್ತಿಲ್ಲ ಎಂದು ಗರ್ವಾಲೆ ಗ್ರಾ.ಪಂ. ಅಧ್ಯಕ್ಷ ಸುಭಾಷ್ ಅವರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ಅಧಿಕಾರಿಗಳು ಆಗಮಿಸಬೇಕೆಂದು ಪಟ್ಟುಹಿಡಿದು ಸಂಜೆಯವರೆಗೂ ಪ್ರತಿಭಟನೆ ಕುಳಿತ ಗ್ರಾಮಸ್ಥರು, ಪರಿಹಾರ ವಿತರಣೆಯಲ್ಲಿ ಅನ್ಯಾಯವಾದ ಬಗ್ಗೆ ಆಕ್ರೋಶ ಮುಂದುವರೆಸಿದರು. ಈ ಸಂದರ್ಭ ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಅವರು ಜಿಲ್ಲಾಡಳಿತ ದೊಂದಿಗೆ ಮಾತುಕತೆ ನಡೆಸಿದರು. ತಕ್ಷಣಕ್ಕೆ ಬೇಕಾಗುವ ಪಡಿತರವನ್ನು ವಿತರಿಸಲು ಕ್ರಮಕೈಗೊಳ್ಳುವದಾಗಿ ಜಿಲ್ಲಾಧಿಕಾರಿ ತಿಳಿಸಿದರು. ಆದರೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದರು.
ಅಮಾನತಿಗೆ ಆಗ್ರಹ: ಗರ್ವಾಲೆ ಗ್ರಾ.ಪಂ.ನ್ನು ನಿರ್ಲಕ್ಷ್ಯ ಮಾಡುತ್ತಿರುವ ಕಂದಾಯ ನಿರೀಕ್ಷಕ, ಅಭಿವೃದ್ಧಿ ಅಧಿಕಾರಿ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಬೇಕು. ಸರ್ಕಾರಿ ಅಧಿಕಾರಿಗಳು ಕೂಲಿ ಕಾರ್ಮಿಕ ಸಂತ್ರಸ್ತರಿಗೆ 3,800 ಪರಿಹಾರ ವಿತರಿಸಲಾಗಿದೆ. ಆದರೆ ತನ್ನ ಕೃಷಿ, ಜಾನುವಾರುಗಳನ್ನು ಕಳೆದುಕೊಂಡಿರುವ ಈ ಭಾಗದ ಕೃಷಿಕರಿಗೆ ಯಾವದೇ ಸೌಲಭ್ಯವನ್ನು ಕೊಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ತಕ್ಷಣ ಇವರುಗಳನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅವರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.