ಮಡಿಕೇರಿ, ಸೆ. 6: ಇಲ್ಲಿನ ದೇಚೂರು ರಸ್ತೆಯ ಚೆಪ್ಪುಡಿಮೊಟ್ಟೆ ಎಂಬಲ್ಲಿ ಈ ಸಂಜೆ ಜೀಪೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಕಲ್ಕತ್ತಾ ಮೂಲದವನೆಂದು ಹೇಳಲಾಗಿರುವ ಕಾರ್ಮಿಕ ತೋಫಾನ್ ಎಂಬಾತ ಮೃತ ದುರ್ದೈವಿ.
ಇಲ್ಲಿನ ಮುಳಿಯಾ ಬಡಾವಣೆ ಯಲ್ಲಿ ಗುತ್ತಿಗೆದಾರ ಸುರೇಶ್ ಎಂಬವರ ಕಾರ್ಮಿಕನಾಗಿದ್ದ ತೋಫಾನ್ ಕೆಲಸದ ಸಂಬಂಧ ಅಲ್ಲಿಗೆ ತೆರಳಿದ ವೇಳೆ ಇಳಿಜಾರಿನಲ್ಲಿ ಜೀಪುವಿಗೆ (ಕೆಎ 12 ಎಂ 5815) ಅಡ್ಡ ಸಿಲುಕಿ ಸಾವನ್ನಪ್ಪಿದಾಗಿ ತಿಳಿದು ಬಂದಿದೆ.
ಮಡಿಕೇರಿ ನಿವಾಸಿ ಎಂ.ಬಿ. ಈರಪ್ಪ ಎಂಬವರು ದೇಚೂರುವಿನಲ್ಲಿ ತನ್ನ ಸಂಬಂಧಿಕರೊಬ್ಬರ ಯೋಗ ಕ್ಷೇಮ ವಿಚಾರಿಸಿಕೊಂಡು ಹಿಂತೆರಳುವ ವೇಳೆ ಅವಘಡ ಸಂಭವಿಸಿದ್ದು, ತೋಫಾನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಜೀಪುವಿನಲ್ಲಿದ್ದ ಈರಪ್ಪ ಹಾಗೂ ಸಂಬಂಧಿಕರುಗಳಾದ ಶಾಂತಿ, ಕಮಲ, ಗೌರಮ್ಮ, ಚೋಂದಮ್ಮ, ಪೂವಮ್ಮ, ಕುಸುಮ, ಭವಾನಿ, ಜಯ ಎಂಬವರುಗಳು ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಅವಘಡ ಸಂಬಂಧ ನಗರ ಸಂಚಾರಿ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು, ಕಾನೂನು ಕ್ರಮ ಕೈಗೊಂಡಿದ್ದಾರೆ.