ಮಡಿಕೇರಿ, ಸೆ. 5 : ಕಾಫಿ ಬೆಳೆಗಾರರ ತೋಟಗಳಲ್ಲಿ ಕಡಿದು ಪರಿವರ್ತಿಸಲ್ಪಟ್ಟಿರುವ ಮರದ ದಿಮ್ಮಿಗಳು ಹಾಗೂ ಸೌದೆಯನ್ನು ಸಾಗಾಟ ಮಾಡಲು ಅನುವು ಮಾಡಿ ಕೊಡಬೇಕು ಎಂದು ಸೋಮವಾರಪೇಟೆ ತಾಲೂಕು ಟಿಂಬರ್ ಕೆಲಸಗಾರರ ಸಂಘ ಜಿಲ್ಲಾಧಿಕಾರಿ ಯವರನ್ನು ಕೋರಿಕೊಂಡಿದೆ. ಜುಲೈ 3 ರಂದು ಜಿಲ್ಲಾಧಿಕಾರಿಗಳ ಆದೇಶದಂತೆ ಟಿಂಬರ್ ಕೆಲಸವನ್ನು ಸ್ಥಗಿತಗೊಳಿಸ ಲಾಗಿದ್ದು, ಕೆಲಸವಿಲ್ಲದೆ ತಮ್ಮ ಆರ್ಥಿಕ ಸ್ಥಿತಿ ಕುಸಿದು ಹೋಗಿದ್ದು, ಕುಟುಂಬ ನಿರ್ವಹಣೆಯು ತುಂಬಾ ಕಷ್ಟವಾಗಿದೆ, ಬದುಕು ದುಸ್ಥರವಾಗಿದೆ ಎಂದು ಕೆಲಸಗಾರರ ಸಂಘ ಮನವಿಯಲ್ಲಿ ತಿಳಿಸಿದೆ. ಅಧಿಕ ಮಳೆಯಿಂದ ಕಾಫಿ ತೋಟಗಳಲ್ಲಿ ಬೆಳೆಗಾರರಿಗೆ ಅಪಾರ ನಷ್ಟವುಂಟಾಗಿ ತಮಗೆ ದುಡಿಯಲು ಕೆಲಸವಿಲ್ಲವಾಗಿದೆ. ಸಾವಿರಾರು ಸಂಖ್ಯೆಯಲ್ಲಿರುವ ನಮಗೆ ಜೀವನ ನಿರ್ವಹಣೆಯು ತುಂಬಾ ಕ್ಲಿಷ್ಟವಾಗಿರುತ್ತದೆ. ಈ ನಡುವೆ ಅಕ್ಟೋಬರ್ 29ರ ವರೆಗೆ (ಎರಡು ತಿಂಗಳು) ಮತ್ತೆ ಮರದ ದಿಮ್ಮಿಗಳನ್ನು ಸಾಗಾಟ ಮಾಡದಂತೆ ನಿರ್ಬಂಧಿಸಿರುವದರಿಂದ ನಮ್ಮ ಬದುಕು ಮತ್ತಷ್ಟು ಬರ್ಬರವಾಗಿದೆ ಆದುದರಿಂದ ಈ ಆದೇಶವನ್ನು ಸರಳೀಕರಿಸಿ ಮರದ ದಿಮ್ಮಿ ಹಾಗೂ ಸೌದೆಯನ್ನು ಸಾಗಾಟ ಮಾಡಲು ಅನುವು ಮಾಡಿ ಕೊಡಬೇಕೆಂದು ಸಂಘವು ಜಿಲ್ಲಾಧಿಕಾರಿ ಗಳೊಂದಿಗೆ ವಿನಂತಿಸಿ ಕೊಂಡಿದೆ.