ಮಡಿಕೇರಿ ಸೆ. 5 : ಹುಟ್ಟಿ ಬೆಳೆದ ಸ್ಥಳ ದುಗುಡ-ದುಮ್ಮಾನಗಳಿಲ್ಲದೆ ನಲಿದಾಡುತ್ತಿದ್ದ ಸ್ಥಳವೆಲ್ಲಿ ? ಇದು ಅಪರಿಚಿತವಾದ ಜಾಗ. ಹೊಸ ಹೊಸ ಮುಖಗಳು. ತಂದೆ-ತಾಯಿಗಳೊಂದಿಗೆ, ತಾತ-ಅಜ್ಜಿಯರೊಂದಿಗೆ ಹೇಳಿಕೊಳ್ಳೋಣ ಎಂದರೆ ಪಕ್ಕದಲ್ಲಿ ಅವರಿಲ್ಲ. ತಮಗೆ ವಿದ್ಯೆ-ಬುದ್ಧಿ ಕಲಿಸಿಕೊಡುತ್ತಿದ್ದ ಶಿಕ್ಷಕರಿಲ್ಲ. ಯಾರಿಗೆ ಹೇಳುವದು... ಯಾರನ್ನು ಕೇಳುವದು ಎಂಬಂತಹ ಪುಟಾಣಿಗಳ ಮನದಾಳದ ತೊಯ್ದಾಟ ಇದೆಲ್ಲವೂ ಕನಸೋ... ನನಸೋ ಎಂಬಂತಹ ಭಾವನೆ. ಬಹುಶ: ಈ ಸನ್ನಿವೇಶವನ್ನು ಪುಟಾಣಿ ಮಕ್ಕಳಿರಲಿ ಯಾರಿಗೂ ಜೀರ್ಣಿಸಿಕೊಳ್ಳಲಾಗದು.
ತಮ್ಮೂರಲ್ಲಿ ಹಬ್ಬವಿಲ್ಲ ಎಂಬ ಕೊರಗು ಒಂದೆಡೆಯಾದರೆ, ತಾವಿರುವ ಈಗಿನ ಸ್ಥಳದಲ್ಲಿನ ಮಕ್ಕಳಲ್ಲಿ ಕಂಡುಬರುತ್ತಿದ್ದ ಹಬ್ಬದ ಸಂಭ್ರಮ ಇವರಿಗೆ ಮನ ಕಲಕುವಂತದ್ದೇ ಆಗಿತ್ತು. ಆದರೆ ಈ ನೊಂದಜೀವಗಳ ಈ ಮೂಕರೋಧನವನ್ನು ಕೊಡಗಿನ ಸೂಕ್ಷ್ಮ ಜೀವಿಗಳು ಅರಿತುಕೊಂಡಿದ್ದರು. ಇವರೆಲ್ಲರಿಗೂ ಈ ರೀತಿಯ ಭಾವನೆಗಳೇ ಮೂಡದಂತೆ ಇವರುಗಳು ಕ್ರಿಯಾತ್ಮಕವಾದ ಈ ಮಕ್ಕಳು ಊಹೆ ಮಾಡಿರದಂತಿದ್ದ ಕಾರ್ಯಕ್ರಮದ ಮೂಲಕ ಘಟಿಸಿ ಹೋದ ನೋವುಗಳೆಲ್ಲವನ್ನು ಮರೆಯಾಗಿಸಿ ಅವರಲ್ಲಿ ಹರುಷದ ಹೊನಲು ಹರಿಸಿ, ಮಾನಸಿಕವಾಗಿಯೂ ಧೈರ್ಯ-ಸ್ಥೈರ್ಯ ತುಂಬಿದ ಕಥೆಯಲ್ಲ... ನೈಜತೆಯ ಚಿತ್ರಣವಿದು.
ಮಡಿಕೇರಿ ತಾಲೂಕಿನ ಮಕ್ಕಂದೂರು, ಮುಕ್ಕೋಡ್ಲು, ಗಾಳಿಬೀಡು ಮತ್ತಿತರ ಕಡೆಗಳಲ್ಲಿ ಇತ್ತೀಚೆಗೆ ಅಂದರೆ ಕೆಲವು ದಿನಗಳ ಹಿಂದೆಯಷ್ಟೇ ನಡೆದ ಪ್ರಾಕೃತಿಕ ದುರಂತದ ಅರಿವು ಎಲ್ಲರಿಗೂ ಇದೆ. ಆಸ್ತಿ-ಪಾಸ್ತಿ, ಮನೆ-ಮಠಗಳೊಂದಿಗೆ ಜೀವಹಾನಿಗಳೂ ನಡೆದುಹೋಗಿದ್ದು ಹಲವಾರು ಮಂದಿ ನಿರಾಶ್ರಿತರಾಗಿ ಹೋಗಿದ್ದಾರೆ. ಹಿರಿಯರ ಬವಣೆ ಒಂದು ರೀತಿಯದ್ದಾದರೆ, ಮಕ್ಕಳ ಕಥೆ ಮತ್ತೊಂದು ರೀತಿಯದ್ದು. ಓದುತ್ತಿದ್ದ ಶಾಲೆಗಳೇ ಇಲ್ಲ. ಪಾಠದ ಸಾಮಗ್ರಿಗಳಿಲ್ಲ. ಒಟ್ಟಿಗೆ ಪೋಷಕರಿಲ್ಲದ ಸ್ಥಿತಿ.
ಕೊಡಗು ಕಂಡು-ಕೇಳರಿಯದ ಈ ರೀತಿಯ ದುರಂತ ಎದುರಾದಾಗ ಇದಕ್ಕೆ ಎಲ್ಲರೂ ಮಿಡಿದಿದ್ದಾರೆ. ಇಡೀ ರಾಜ್ಯವೂ ಸ್ಪಂದಿಸಿದೆ. ಈ ರೀತಿಯಲ್ಲಿ ಸಂತ್ರಸ್ತರಾದ ವಿದ್ಯಾರ್ಥಿಗಳಿಗೆ ಪೊನ್ನಂಪೇಟೆಯ ಸಾಯಿಶಂಕರ ವಿದ್ಯಾಸಂಸ್ಥೆಯೂ ಬಾಗಿಲು ತೆರೆದಿದ್ದು ಉಚಿತ ಊಟ-ವಸತಿ, ವಿದ್ಯೆ ನೀಡಲು ಮುಂದಾಗಿ ಸಂಕಷ್ಟಕ್ಕೊಳಗಾದ ಜಾಗದ ವಿದ್ಯಾರ್ಥಿಗಳಲ್ಲಿ-ಪೋಷಕರಲ್ಲಿ ಆಶಾಕಿರಣ ಮೂಡಿಸಿ ಇದರಂತೆ ಸಂಸ್ಥೆ 120 ರಷ್ಟು ವಿದ್ಯಾರ್ಥಿಗಳಿಗೆ ಆಶ್ರಯ ಕಲ್ಪಿಸಿತ್ತು.
ಇದರ ನಡುವೆಯೇ ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ಕೈಲುಮುಹೂರ್ತವೂ ಎದುರಾಗಿತ್ತು. ಅಲ್ಲಲ್ಲಿನ ಸಂಪ್ರದಾಯದಂತೆ ಸಂಕಷ್ಟಕ್ಕೊಳಗಾದ ಪ್ರದೇಶದಲ್ಲಿ ಈ ಬಾರಿ ಹಬ್ಬ ಆಚರಿಸಲಾಗದ ಪರಿಸ್ಥಿತಿ ಇದ್ದರೆ, ಇಡೀ ಜಿಲ್ಲೆಯಲ್ಲೂ ಸರಳ ಆಚರಣೆ ಜನತೆ ಮುಂದಾಗಿ ಮಾನವೀಯತೆ ತೋರಿದ್ದರು.
ಸೆಪ್ಟ್ಟೆಂಬರ್ 3ರ ಸೋಮವಾರದಂದು ಈ ಹಬ್ಬದ ಸಾರ್ವತ್ರಿಕ ಆಚರಣೆ. ಈ ದಿನ ಕೆಲವರು ಸೇರಿ ಈ ವಿದ್ಯಾಸಂಸ್ಥೆ ಸೇರಿರುವ ವಿದ್ಯಾರ್ಥಿಗಳಲ್ಲಿ ನೋವು ಮರೆಮಾಡಿಸಿ ಸ್ಥೈರ್ಯ ತುಂಬಲು ನಡೆಸಿದ ಪ್ರಯತ್ನ ಶ್ಲಾಘನೀಯವಾಗಿದೆ.
ಯಾವ ರೀತಿಯಾಗಿತ್ತು ಇದು....
ಯುನೈಟೆಡ್ ಕೊಡವ ಆರ್ಗನೈಷೇಷನ್ (ಯುಕೋ) ಸಂಸ್ಥೆ ಸಂಘಟನೆಗೆ ಮುಂದಾದರೆ, ಕಿರುಗೂರಿನ ಚೆಪ್ಪುಡೀರ ಕುಟುಂಬಸ್ಥರು ತಮ್ಮ ಐನ್‍ಮನೆಯಲ್ಲಿ ಪ್ರಾಯೋಜಕತ್ವ ನೀಡಿದರು. ಸಾಯಿಶಂಕರ ವಿದ್ಯಾಸಂಸ್ಥೆಯವರು, ಕೂರ್ಗ್ ವೆಲ್‍ನೆಸ್ ಫೌಂಡೇಶನ್‍ನವರು ಕೈಜೋಡಿಸಿದರು.
ಈ ಮಕ್ಕಳೆಲ್ಲರನ್ನೂ ಚೆಪ್ಪುಡೀರ ಐನ್‍ಮನೆಗೆ ಕರೆದೊಯ್ಯಲಾಯಿತು. ಅಲ್ಲಿ ಹಬ್ಬದ ಸಾಂಪ್ರದಾಯಿಕ ಆಚರಣೆಯಂತೆ ಆಯುಧಪೂಜೆ ನೆರವೇರಿಸ ಲಾಯಿತು. ಸಂಪ್ರದಾಯದಂತೆ ಹಿರಿಯರಿಗೆ ಎಡೆ ಇಡಲಾಯಿತು. ಬಳಿಕ ಈ ಮಕ್ಕಳೊಂದಿಗೆ ಸಂಭ್ರಮಿಸಲಾಯಿತು. ಹಬ್ಬದೂಟ ಉಣ ಬಡಿಸುವದರೊಂದಿಗೆ ಮಕ್ಕಳಿಂದ ಹಾಡು, ಮಿಮಿಕ್ರಿ, ವಾಲಗತ್ತಾಟ್‍ನಂತಹ ಕಾರ್ಯಕ್ರಮದೊಂದಿಗೆ ಅವರು ಗಳಲ್ಲಿ ಮುಂದಿನ ಭವಿಷ್ಯದ ಕುರಿತು ಹಿರಿಯರು ಮಾನಸಿಕ ಸ್ಥೈರ್ಯ ತುಂಬುವ ಪ್ರಯತ್ನ ನಡೆಸಿದರು. ಯಾವದೇ ಬೇಧ-ಭಾವ, ಭಿನ್ನಾಭಿಪ್ರಾಯಗಳಿಲ್ಲದೆ ನಡೆದ ಈ ಕಾರ್ಯಚಟುವಟಿಕೆ ಮಕ್ಕಳಲ್ಲಿ ಹೊಸ ಉತ್ಸಾಹ ಸೃಷ್ಟಿಸಿತ್ತು. ಬೆಳಿಗ್ಗೆ 10.30 ರಿಂದ ಸಂಜೆ 4ರ ತನಕ ಇದೊಂದು ಅಪರೂಪದ ಕಾರ್ಯಕ್ರಮವಾಗಿ ಕೊಡಗಿನ ಪುನರ್ ನಿರ್ಮಾಣಕ್ಕೆ ಹೊಸತೊಂದು ಮೈಲಿಗಲ್ಲಾಗಿದ್ದು ಕೊಡಗಿನ ವಿಶೇಷತೆಯಾಗಿತ್ತು. ಚೆಪ್ಪುಡೀರ ಕುಟುಂಬದ ಅಧ್ಯಕ್ಷ ದೇವಯ್ಯ ಕೊರವಕಾರ ಬೋಜಿ ಕುಟ್ಟಪ್ಪ, ಅರುಣ್, ರಾಜೇಶ್, ಸುಜು ಕರುಂಬಯ್ಯ, ಸುನಿಲ್, ನಂದಕುಮಾರ್, ಜ್ಯೋತಿ ದೇವಯ್ಯ, ಪ್ರತಿಮಾ ಕರುಂಬಯ್ಯ, ರೂಪಾ, ಪ್ರೀತಿ, ಸುಶೀಲ ಮತ್ತಿತರ ಕುಟುಂಬದ ಪ್ರಮುಖರು ಯುಕೋ ಸಂಘಟನೆಯ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕಳ್ಳಿಚಂಡ ರಾಬಿನ್, ಮಾದೇಟಿರ ತಿಮ್ಮಯ್ಯ, ಕಳ್ಳಿಚಂಡ ಕುಶಾಲಪ್ಪ, ಲೋಹಿತ್ ಭೀಮಯ್ಯ, ಪತ್ರಕರ್ತ ಮಾನಿಪಂಡ ಸಂತೋಷ್, ಸಾಯಿಶಂಕರ ವಿದ್ಯಾಸಂಸ್ಥೆಯ ಕೋಳೇರ ಝರು ಗಣಪತಿ, ತಿಮ್ಮಯ್ಯ, ಕೂರ್ಗ್ ವೆಲ್‍ನೆಸ್ ಫೌಂಡೇಶನ್‍ನ ನಿಕ್ಕಿ ಗಣಪತಿ ಮತ್ತಿತರರು ಇಂತದೊಂದು ಕಾರ್ಯಕ್ರಮ ದಲ್ಲಿ ಭಾಗಿಗಳಾಗಿದ್ದರು. ? ಶಶಿ ಸೋಮಯ್ಯ