ಮಡಿಕೇರಿ, ಸೆ. 5: ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶದಲ್ಲಿ ಜೀವವೈವಿಧ್ಯಕ್ಕೆ ಹಾನಿಯಾಗುವ ಯಾವದೇ ಯೋಜನೆಗಳಿಗೆ ಅನುಮೋದನೆ ನೀಡದಂತೆ ಕರ್ನಾಟಕವೂ ಸೇರಿದಂತೆ ಆರು ರಾಜ್ಯಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ ಸೂಚನೆ ನೀಡಿದೆ. ಪಶ್ಚಿಮ ಘಟ್ಟದ ಜೀವವೈವಿಧ್ಯ ಗಂಭೀರ ಸ್ವರೂಪದ ಒತ್ತಡದಲ್ಲಿದೆ ಎಂದು ಹೇಳಿರುವ ಹಸಿರು ನ್ಯಾಯಪೀಠ ಈ ಬಗ್ಗೆ ಸೂಚನೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯಲ್ ಅಧ್ಯಕ್ಷತೆಯ ಪೀಠ ಈ ಸೂಚನೆಯನ್ನು ಹೊರಡಿಸಿದೆ.
2014ರ ಸೆ.25ರಂದು ಹೊರಡಿಸಿದ್ದ ಆದೇಶದಲ್ಲಿ ಯಾವ ಯಾವ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಲಾಗಿದೆಯೋ ಅಲ್ಲಿ ಪರಿಸರಕ್ಕೆ ಧಕ್ಕೆಯಾಗುವ ಯೋಜ ನೆಗಳಿಗೆ ಅನುಮತಿ ನೀಡಬಾರದು ಎಂದು ಸ್ಪಷ್ಟಪಡಿಸಿರುವ ಪೀಠ ಇದೇ ವೇಳೆ ಆ.26ಕ್ಕೆ ಮುಕ್ತಾಯಗೊಂಡಿರುವ ಪಶ್ಚಿಮ ಘಟ್ಟಗಳ ಕರಡು ಸುತ್ತೋಲೆಯನ್ನು ಮರು ಪ್ರಕಟಿಸಲು ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಅನುಮತಿ ನೀಡಿದೆ. ಇದರೊಂದಿಗೆ ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದ 2017 ಫೆ. 27ರ ಸುತ್ತೋಲೆಯ ಮಾದರಿಯಲ್ಲಿ ಯಾವದೇ ಬದಲಾವಣೆಗಳಿಲ್ಲದೆ ವಿಷಯವನ್ನು ಆರು ತಿಂಗಳೊಳಗೆ ಅಂತಿಮಗೊಳಿಸು ವಂತೆಯೂ ಸೂಚನೆ ನೀಡಿದೆ. ಸುತ್ತೋಲೆಗೆ ಸಂಬಂಧಿಸಿದಂತೆ ಆಕ್ಷೇಪ ಸಲ್ಲಿಕೆಗೆ ರಾಜ್ಯಗಳು ವಿಳಂಬ ಮಾಡಿರುವದಕ್ಕೂ ನ್ಯಾಯಾಧೀಕರಣ ತರಾಟೆಗೆ ತೆಗೆದುಕೊಂಡಿದ್ದು, ರಾಜ್ಯ ಸರಕಾರಗಳ ಇಂತಹ ನಡೆ ಸೂಕ್ಷ್ಮ ಪರಿಸರ ವಲಯ ವನ್ನು ಕಾಪಾಡಲು ಸೂಕ್ತವಾದುದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಇದಕ್ಕೂ ಮುನ್ನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೇರಲಾದ ನಿಷೇಧಾತ್ಮಕ ಮತ್ತು ನಿಯಂತ್ರಕ ನೀತಿಗಳಿಗೆ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದೆ. ಗೋವಾ, ಗುಜರಾತ್ ತಮ್ಮ ನಿಲುವು ಗಳನ್ನೇ ಸಲ್ಲಿಸಿಲ್ಲ ಎಂದು ನ್ಯಾಯಾಧೀ ಕರಣಕ್ಕೆ ಸಚಿವಾಲಯ ಸಲ್ಲಿಸಿದ್ದ ಅಫಿಡವಿಟ್‍ನಲ್ಲಿ ತಿಳಿಸಲಾಗಿತ್ತು.