* ಜಿ. ಪಂ. ಸದಸ್ಯ ಬಿ.ಎನ್. ಪ್ರಥ್ಯು ಪ್ರಶ್ನೆ * ಇಡೀ ಜಿಲ್ಲೆಯ ಜನರ ಸಾಲ ಮನ್ನಾ ಮಾಡಲು ಒತ್ತಾಯ

ಪೊನ್ನಂಪೇಟೆ, ಸೆ. 5: ಕಳೆದ ತಿಂಗಳು ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ದುರಂತ ಇಡೀ ಜಿಲ್ಲೆಯನ್ನೆ ತಲ್ಲಣಗೊಳಿಸಿಬಿಟ್ಟಿದೆ. ಈ ದುರಂತದ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ಸರಕಾರದ ವಿವಿಧ ಇಲಾಖಾಧಿಕಾರಿಗಳು ಮತ್ತು ನೂರಾರು ಸಂಘ-ಸಂಸ್ಥೆಗಳು ನೇರ ಪರಿಹಾರ ಕಾರ್ಯದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡು ಸಂತ್ರಸ್ತರ ಕಣ್ಣೀರೊರೆಸುವ ಕೆಲಸ ಮಾಡಿರುವದು ಶ್ಲಾಘನೀಯ. ಆದರೆ ಪ್ರಕೃತಿ ದುರಂತ ಪರಿಹಾರ ಕಾರ್ಯದಲ್ಲಿ ಜಿಲ್ಲೆಗೆ ಅರಣ್ಯ ಇಲಾಖೆಯ ಕೊಡುಗೆಯೇನು?. ಸಂತ್ರಸ್ತರ ಕಣ್ಣೀರು ಒರೆಸುವಲ್ಲಿ ಇಲಾಖೆ ಮಾಡಿದ ಕೆಲಸವಾದರು ಏನು? ಎಂದು ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಪ್ರಶ್ನಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೌರ್ಭಾಗ್ಯವೆಂಬತೆ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಹೆಚ್ಚಿನ ಭೂಕುಸಿತ ಉಂಟಾಗಿರುವದು ಅರಣ್ಯ ಪ್ರದೇಶದಲ್ಲಿ. ಆದರೂ ಏನು ಸಂಭವಿಸಿಲ್ಲ ಎಂಬಂತೆ ನಟಿಸುತ್ತಿರುವ ಅರಣ್ಯ ಇಲಾಖೆ ದುರಂತ ಪರಿಹಾರ ಕಾರ್ಯದಲ್ಲಿ ಯಾವದೇ ರೀತಿ ಸ್ಪಂದಿಸಲಿಲ್ಲ. ಪ್ರವಾಹ ಬಂದು ಸಾವಿರಾರು ಜನ ಸಂತ್ರಸ್ತರು ನಿರ್ಗತಿಕರಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮನೆಯಲ್ಲಿ ಬೆಚ್ಚಗೆ ಕುಳಿತಿದ್ದರು. ದುರಂತದ ಸಮಯದಲ್ಲಿ ನೊಂದ ಜನರನ್ನು ರಕ್ಷಿಸುವದು ಹೋಗಲಿ, ಪ್ರವಾಹ ಪೀಡಿತ ಸ್ಥಳಗಳಿಂದ ಬೇರೆ ಬೇರೆ ಇಲಾಖೆ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಶಕ್ತಿ ಮೀರಿ ಶ್ರಮಿಸಿ ಜನರನ್ನು ರಕ್ಷಿಸಿ ಅರಣ್ಯದ ಮೂಲಕ ಅವರನ್ನು ಹೊರಗೆ ಕರೆತರುವಲ್ಲಿಯೂ ಅರಣ್ಯ ಇಲಾಖೆಯ ಪಾತ್ರವಿಲ್ಲ. ಅರಣ್ಯದ ಮಧ್ಯದಲ್ಲಿರುವ ಅನೇಕ ಕಾಲುದಾರಿಗಳ ಬಗ್ಗೆ ಅರಣ್ಯ ಇಲಾಖೆಗೆ ಸಮರ್ಪಕವಾದ ಮಾಹಿತಿ ಇದ್ದರೂ ಇದನ್ನು ದುರಂತ ಸಂಭವಿಸಿದ ಸಂದರ್ಭದಲ್ಲಿ ಸಂಬಂಧಿಸಿದವರಿಗೆ ತಿಳಿಸದೆ ಬೇಜಾವಾಬ್ದಾರಿ ತೋರಿರುವ ಇಲಾಖೆ, ಯಾವದೇ ಪರಿಹಾರ ಕಾರ್ಯಗಳಲ್ಲಿ ಕನಿಷ್ಟ ಎನ್.ಡಿ.ಆರ್.ಎಫ್. ತಂಡಕ್ಕೂ ಸಹಕಾರ ನೀಡಲಿಲ್ಲ ಎಂದು ಅರೋಪಿಸಿದ ಅವರು, ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೂ ಪ್ರಮುಖ ಕಾರಣ ಎಂದು ದೂರಿದರು.

ಕೇವಲ ಜನವಿರೋಧಿ ಕಾನೂನನ್ನು ನೆಪವಾಗಿಸಿ ಮನುಷ್ಯತ್ವ ವಿರೋಧಿ ಧೋರಣೆ ತಳೆದಿರುವ ಕೊಡಗಿನ ಅರಣ್ಯ ಇಲಾಖೆ ತೀರಾ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಅರಣ್ಯ ಇಲಾಖೆಯ ಕೆಲ ನೀತಿಗಳೇ ವನ್ಯಪ್ರಾಣಿಗಳು ಕಾಡಿನಿಂದ ನಾಡಿಗೆ ಬರಲು ಪ್ರಮುಖ ಕಾರಣವಾಗಿದೆ. ಆದರೂ ಬುದ್ದಿ ಕಲಿಯದ ಕೆಲ ಅರಣ್ಯಾಧಿಕಾರಿಗಳು, ಪ್ರಕೃತಿ ದುರಂತವನ್ನು ಗಂಭೀರವಾಗಿ ಪರಿಗಣಿಸದೆ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ತಮ್ಮ ಅತೀವ ಆಕ್ರೋಶ ವ್ಯಕ್ತಪಡಿಸಿರುವ ಪ್ರಥ್ಯು ಅವರು, ಇದೀಗ ಕೊಡಗಿನ ಜನ ಪ್ರಕೃತಿ ದುರಂತದ ನೋವಿನಿಂದ ಹೊರಬರುವ ಮುನ್ನವೇ ವಿವಾದಿತ ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸುವಲ್ಲಿ ಕೆಲ ಪರಿಸರವಾದಿಗಳೊಂದಿಗೆ ಕೈಜೋಡಿಸಿಕೊಂಡು ತೆರೆ ಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಕಸ್ತೂರಿರಂಗನ್ ವರದಿ ಯಾವದೇ ಕಾರಣಕ್ಕೂ ಜಿಲ್ಲೆಯಲ್ಲಿ ಜಾರಿಯಾಗಬಾರದು. ಇಡೀ ಜಿಲ್ಲೆಯ ಜನತೆ ಈ ವರದಿ ಅನುಷ್ಠಾನದ ವಿರುದ್ದವಿದ್ದಾರೆ. ಇದು ಮನುಷ್ಯ ವಿರೋಧಿ ವರದಿಯಾಗಿದೆ. ಇದು ಜಾರಿಯಾದರೆ ಕೆಲವು ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಇದರ ಅಗತ್ಯ ಕೊಡಗಿಗಿಲ್ಲ. ಪ್ರಕೃತಿ ಆರಾಧಕರಾಗಿರುವ ಕೊಡಗಿನ ಜನರು ಮೂಲತಃ ಪರಿಸರ ರಕ್ಷಕರಾಗಿದ್ದಾರೆ. ಪ್ರಕೃತಿಪ್ರೀಯತೆ ಕೊಡಗಿನ ನಿವಾಸಿಗಳಲ್ಲಿ ರಕ್ತಗತವಾಗಿ ಬಂದಿದೆ. ಪರಿಸರವಾದಿಗಳ ಅರಣ್ಯ ರಕ್ಷಣೆಯ ಪಾಠ ಕೊಡಗಿನವರಿಗೆ ಅಗತ್ಯವಿಲ್ಲ. ನಮ್ಮ ಅರಣ್ಯವನ್ನು ನಾವು ಕಾಪಾಡಿಕೊಳ್ಳುತ್ತೇವೆ ಎಂದು ಹೇಳಿರುವ ಅವರು, ಪರಿಸರವಾದಿಗಳಿಗೆ ಪರಿಸರ ಸಂರಕ್ಷಣೆಯ ಕುರಿತು ಬದ್ಧತೆಯಿದ್ದರೆ ಕೊಡಗಿನ ನೆರೆ ಜಿಲ್ಲೆಯಲ್ಲಿರುವ ಬಯಲು ಸೀಮೆ ಪ್ರದೇಶಕ್ಕೆ ತೆರಳಿ ಕಾಡು ಬೆಳೆಸುವದರೊಂದಿಗೆ ಪರಿಸರ ಸಂರಕ್ಷಣೆಯ ಪಾಠ ಅಲ್ಲಿಯವರಿಗೆ ಹೇಳಿಕೊಡಲಿ ಎಂದು ಸವಾಲು ಹಾಕಿದರು.

ಸರಕಾರ ಕೊಡಗಿನ ಪ್ರಕೃತಿ ದುರಂತವನ್ನು ‘ವಿಶೇಷ ದುರಂತ’ವೆಂದು ಪರಿಗಣಿಸಿ ಜಿಲ್ಲೆಯ ಎಲ್ಲಾ ವರ್ಗದವರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿ ಜನರನ್ನು ದುಸ್ತರ ಬದುಕಿನಿಂದ ಮೇಲೆತ್ತಬೇಕು ಎಂದು ಒತ್ತಾಯಿಸಿರುವ ಅವರು, ಸಂತ್ರಸ್ತರಿಗೆ ಕೂಡಲೇ ಅವರ ಇಚ್ಛೆಯ ಸ್ಥಳದಲ್ಲಿ ಪುನರ್ವಸತಿ ಸೌಲಭ್ಯ ಕಲ್ಪಿಸಬೇಕು. ದುರಂತದಿಂದಾಗಿ ತತ್ತರಿಸಿಹೋಗಿರುವ ಬಡವರಿಗೆ ತುರ್ತಾಗಿ ಪರಿಹಾರ ನೀಡಬೇಕು. ಅಲ್ಲದೆ, ಕೊಡಗಿನ ಪ್ರಕೃತಿ ದುರಂತದ ಪರಿಹಾರಕ್ಕಾಗಿ ಕೇಂದ್ರ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಲು ರಾಜ್ಯದ ಮುಖ್ಯಮಂತ್ರಿಗಳು ಸರ್ವಪಕ್ಷದ ನಿಯೋಗವನ್ನು ದೆಹಲಿಗೆ ಕರೆದೊಯ್ಯಬೇಕು ಎಂದು ಅಗ್ರಹಿಸಿದರು.