(ವರದಿ ಚಂದ್ರಮೋಹನ್)
ಕುಶಾಲನಗರ, ಸೆ. 5: ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ವ್ಯಾಪಾರ ವಹಿವಾಟಿನಲ್ಲಿ ಬಹುತೇಕ ಏರುಪೇರು ಉಂಟಾಗಿದ್ದು, ಉದ್ಯಮಿಗಳು ಆತಂಕ ಕ್ಕೊಳಗಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ವಿವಿಧ ಕಾರಣಗಳಿಂದ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಅಡ್ಡಿಯುಂಟಾಗುವುದರೊಂದಿಗೆ ನಡುವೆ ಹೋಟೆಲ್, ರೆಸಾರ್ಟ್‍ಗಳ ಚಟುವಟಿಕೆಗಳು ಸಂಪೂರ್ಣ ಕ್ಷೀಣಗೊಂಡಿದೆ. ಇದೀಗ ಕುಶಾಲನಗರದಲ್ಲಿ ನದಿ ನೀರು ಉಕ್ಕಿ ಹರಿಯುವ ಮೂಲಕ ಜನತೆ ಸಂಕಷ್ಟಕ್ಕೆ ಒಳಗಾಗಿದ್ದರೆ, ಇನ್ನೊಂದೆಡೆ ಮಡಿಕೇರಿ-ಸೋಮವಾರಪೇಟೆ ನಡುವೆ ಬೆಟ್ಟ ಕುಸಿದು ಜನಜೀವನ ಪೂರ್ಣ ಸ್ಥಗಿತಗೊಂಡಿರುವುದು ಪ್ರಸಕ್ತ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಗಳು ಕಡಿತಗೊಂಡ ಬೆನ್ನಲ್ಲೇ ಜಿಲ್ಲೆಯ ಮೂಲಕ ಹಾದುಹೋಗುವ ಸಂಚಾರ ವ್ಯವಸ್ಥೆ ಕೂಡ ಏರುಪೇರಾಗಿರುವುದು ಪರೋಕ್ಷವಾಗಿ ಜಿಲ್ಲೆಯ ವ್ಯಾಪಾರೋದ್ಯಮಕ್ಕೆ ಬಲವಾದ ಹೊಡೆತ ನೀಡಿದಂತಾಗಿದೆ.
ಕೊಡಗು ಜಿಲ್ಲೆಯ ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ಬೆಂಗಳೂರು, ಮೈಸೂರು, ಹಾಸನ ಸೇರಿದಂತೆ ವಿವಿಧೆಡೆಗಳಿಂದ ಆಹಾರ ಸಾಮಗ್ರಿಗಳು ಸಮರೋಪಾದಿಯಲ್ಲಿ ಹರಿದು ಬಂದಿದ್ದು, ಇದು ಕೂಡ ಸ್ಥಳೀಯ ವ್ಯಾಪಾರ ವಹಿವಾಟಿನ ಏರುಪೇರಿಗೆ ಕಾರಣವಾಗಿದೆ. ಅಲ್ಲದೆ ನಿಜವಾದ ಸಂತ್ರಸ್ತರನ್ನು ಹೊರತುಪಡಿಸಿ ಕೆಲವೆಡೆ ಲೋಡು ಗಟ್ಟಲೆ ಸಾಮಗ್ರಿಗಳು ಗುಪ್ತವಾಗಿ ಮನೆಮನೆಗೆ ಹರಿದಾಡಿದ್ದು ಇದರಿಂದ ಪರೋಕ್ಷವಾಗಿ ಪ್ರಮುಖ ಪಟ್ಟಣಗಳ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಬಹುತೇಕ ಕ್ಷೀಣಿಸಿದೆ ಎನ್ನಲಾಗಿದೆ.
ಕಳೆದ 15 ದಿನಗಳಿಂದ ಕುಶಾಲನಗರ ಪಟ್ಟಣದಲ್ಲಿ ಜನರ ಓಡಾಟ ಕೂಡ ಬಹುತೇಕ ಸ್ಥಗಿತಗೊಂಡಿದ್ದು ವ್ಯಾಪಾರ ವಹಿವಾಟು ನಡೆಯುತ್ತಿಲ್ಲ ಎನ್ನುತ್ತಾರೆ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷರಾದ ಅಮೃತ್‍ರಾಜ್. ಬಹುತೇಕ ಸಾಮಗ್ರಿಗಳ ಏಜೆನ್ಸಿಗಳು ಕೂಡ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಎಂದು ಅವರು ಮಾಹಿತಿ ನೀಡಿದ್ದಾರೆ. ಆಹಾರ ಸಾಮಗ್ರಿಗಳ ಸರಬರಾಜು ಜಿಲ್ಲೆಯಲ್ಲಿ ಶೇ.50 ರಷ್ಟು ಕ್ಷೀಣಿಸಿದೆ ಎಂದಿದ್ದಾರೆ.
ಹೊರ ಭಾಗಗಳ ಸಂತ್ರಸ್ತರಿಗೆ ಸಹಾಯಹಸ್ತ ಚಾಚುವ ಹಿನ್ನಲೆಯಲ್ಲಿ ಅಂದಾಜು 500 ಲಾರಿಗಳಷ್ಟು ಆಹಾರ ಸಾಮಗ್ರಿಗಳು ಪೂರೈಕೆಯಾಗಿದ್ದು, ಇದರಿಂದ ಪರೋಕ್ಷವಾಗಿ ವ್ಯಾಪಾರಿಗಳು ವಹಿವಾಟಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎನ್ನುವುದು ಸ್ಥಳೀಯ ವ್ಯಾಪಾರಿಗಳ ಅಭಿಪ್ರಾಯವಾಗಿದೆ. ಪ್ರವಾಹ ಬಂದ ನಂತರ ಹೆಚ್ಚಿನ ವಹಿವಾಟುಗಳು ಹಿಂದಿನಂತೆ ನಡೆಯುತ್ತಿಲ್ಲ. ಜನತೆ ಕೂಡ ಮನೆ ಬಿಟ್ಟು ಹೊರಬರುತ್ತಿಲ್ಲ. ಇದರಿಂದ ವ್ಯಾಪಾರಿಗಳಿಗೆ ಕನಿಷ್ಟ ಶೇ.30 ರಷ್ಟು ವಹಿವಾಟು ಆಗುತ್ತಿಲ್ಲ ಎಂದು ಸ್ಥಳೀಯ ಉದ್ಯಮಿ ಎಸ್.ಎನ್.ನರಸಿಂಹಮೂರ್ತಿ ಶಕ್ತಿಯೊಂದಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದ ಸೂಪರ್ ಮಾರ್ಕೆಟ್‍ಗಳಲ್ಲಿ ಕೂಡ ಗ್ರಾಹಕರ ಕೊರತೆ ಎದ್ದು ಕಾಣುತ್ತಿದ್ದು ವ್ಯಾಪಾರದ ಕೊರತೆಯಿಂದ ಕಾರ್ಮಿಕರಿಗೆ ವೇತನ ನೀಡುವ ಹೊರೆ ಉಂಟಾಗಿದೆ. ದಿನನಿತ್ಯ ಜನರು ಬಳಸುವ ಅಕ್ಕಿ, ಬೇಳೆ ಮತ್ತಿತರ ಆಹಾರ ಸಾಮಗ್ರಿಗಳು ವಿವಿಧೆಡೆ ಹಲವರ ಕೈಸೇರಿದ್ದು ಇದಕ್ಕೆ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಕುಶಾಲನಗರದ ಉದ್ಯಮಿ ಮುರಳಿ. ಮುಂದಿನ 3 ತಿಂಗಳ ಅವಧಿ ತನಕ ಈ ಸಮಸ್ಯೆ ಮುಂದುವರೆಯುವ ಸಾಧ್ಯತೆಯಿದೆ ಎನ್ನುತ್ತಾರೆ ಅವರು.
ಈ ನಡುವೆ ಪ್ರವಾಸಿಗರ ಆಗಮನಕ್ಕೆ ನಿರ್ಬಂಧ ಹೇರಿರುವ ಕಾರಣ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಂಪೂರ್ಣ ಸ್ಥಗಿತಗೊಂಡಿದೆ. ಲಾಡ್ಜ್‍ಗಳು, ರೆಸಾರ್ಟ್‍ಗಳು, ಹೋಟೆಲ್‍ಗಳು ಬಿಕೋ ಎನ್ನುತ್ತಿದ್ದು ಇದರಿಂದ ಹೋಟೆಲ್ ಉದ್ಯಮಿಗಳು ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ನೊಂದಿರುವ ಕೊಡಗು ಜಿಲ್ಲಾ ಹೋಟೆಲ್ ರೆಸಾರ್ಟ್ ಉಪಹಾರ ಗೃಹಗಳ ಸಂಘದ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು, ಪ್ರವಾಸಿಗರಿಗೆ ಅವಕಾಶ ಕಲ್ಪಿಸಬೇಕೆಂದು ಕೋರಿದ್ದಾರೆ. ಲಕ್ಷಾಂತರ ರೂ.ಗಳ ಸಾಲ ಮಾಡಿ ಹೋಟೆಲ್ ಉದ್ಯಮ ಪ್ರಾರಂಭಿಸಿದ್ದು ನಷ್ಟಕ್ಕೊಳಗಾದ ಮಾಲೀಕರು ಬ್ಯಾಂಕ್ ಸಾಲ ಹಿಂತಿರುಗಿಸಲು ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳು ಬಡ್ಡಿ ಮನ್ನಾ ಮಾಡುವಂತೆ ಮನವಿಯಲ್ಲಿ ಕೋರಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷರಾದ ಬಿ.ಆರ್.ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ.
ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಕುಶಾಲನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ಕೂಲಿ ಕಾರ್ಮಿಕರಿಗೆ ಕೆಲಸದ ಕೊರತೆ ಕೂಡ ಎದುರಾಗಿದ್ದು ಬಡಜನತೆ ತಮ್ಮ ಕುಟುಂಬವನ್ನು ನಿರ್ವಹಿಸಲು ಕೂಡ ಸಂಕಷ್ಟ ಪಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಸಾವಿರಾರು ಕಾರ್ಮಿಕರು ಕೆಲಸವಿಲ್ಲದೆ ಬೀದಿ ಪಾಲಾಗುವ ಸಾಧ್ಯತೆ ಅಧಿಕ ಎನ್ನುತ್ತಾರೆ ಸ್ಥಳೀಯರು.
ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಜನರಿಗೆ ಸರಕಾರ ನೆರವು ಕಲ್ಪಿಸಿದೆ. ಇದರೊಂದಿಗೆ ವ್ಯಾಪಾರ ವಹಿವಾಟಿಲ್ಲದೆ ತಾತ್ಕಾಲಿಕವಾಗಿ ಸಂತ್ರಸ್ತರಾಗುತ್ತಿರುವ ಜನತೆ ಬಗ್ಗೆ ಕೂಡ ಸರಕಾರ ಕಾಳಜಿ ವಹಿಸಬೇಕಾಗಿದೆ ಎನ್ನುವ ಆಗ್ರಹ ಕೇಳಿ ಬಂದಿದೆ.