ಮಡಿಕೇರಿ, ಸೆ. 6: ಶಿಕ್ಷಕರ ದಿನಾಚರಣೆ ಅಂಗವಾಗಿ ಉತ್ತಮ ಶಿಕ್ಷಕರಿಗೆ ವರ್ಷಂಪ್ರತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು. ಸರಕಾರದ ವತಿಯಿಂದ ಸಿಕ್ಕ ಗೌರವ ಪ್ರಶಸ್ತಿಯ ಹಣವನ್ನು ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಂತ್ರಸ್ತರಾದವರ ನಿಧಿಗೆ ಅರ್ಪಣೆ ಮಾಡಿರುವ ಈ ಶಿಕ್ಷಕರು ಮಾದರಿಯಾಗಿದ್ದಾರೆ.

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಪೊನ್ನಂಪೇಟೆ ಸರಕಾರಿ ಪ.ಪೂ. ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದ ಆಂಗ್ಲ ಭಾಷಾ ಶಿಕ್ಷಕರಾಗಿರುವ ಕೇಳಪಂಡ ಎನ್. ಮಂಜುನಾಥ್ ಅವರು ನಿನ್ನೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ಪ್ರಶಸ್ತಿಯೊಂದಿಗೆ ದೊರೆತ ರೂ. 10 ಸಾವಿರ ಹಣವನ್ನು ಮುಖ್ಯಮಂತ್ರಿಗಳ ಕೊಡಗು ಸಂತ್ರಸ್ತರ ನಿಧಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಎನ್‍ಸಿಸಿ ಅಧಿಕಾರಿಯೂ ಆಗಿರುವ ಮಂಜುನಾಥ್ ಅವರು ಸಾಕಷ್ಟು ಸಾಧನೆ ಮಾಡಿದ್ದಾರೆ.