ಮಡಿಕೇರಿ, ಸೆ. 5: ಕೊಡಗು ಜಿಲ್ಲೆ ಪ್ರಕೃತಿ ವಿಕೋಪಕ್ಕೆ ಸಿಲುಕಿ ನಲುಗಿ ಹೋಗಿದ್ದು, ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆಗಳೆಲ್ಲ ಕೊಚ್ಚಿ ಹೋಗಿದ್ದು, ಸಂಕಷ್ಟದ ನಡುವೆಯೂ ಸೇವೆ ನೀಡುತ್ತಿರುವ ಖಾಸಗಿ ಬಸ್ ಮಾಲೀಕರು ಕೂಡ ಕಂಗಾಲಾಗಿದ್ದು, ಬಸ್‍ಗಳ ಮೇಲಿನ ತೆರಿಗೆ ಹಾಗೂ ಡೀಸೆಲ್ ಬೆಲೆ ಏರಿಕೆ ಮತ್ತಷ್ಟು ಕಂಗೆಡಿಸಿದೆ. ಈ ಹಿನ್ನೆಲೆಯಲ್ಲಿ ಬಸ್‍ಗಳ ಮೇಲಿನ ತೆರಿಗೆಯಲ್ಲಿ ವಿನಾಯಿತಿ ನೀಡಬೇಕೆಂದು ಕೊಡಗು ಖಾಸಗಿ ಬಸ್ ಮಾಲೀಕರ ಸಂಘ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಸಂಘದ ಪ್ರಮುಖರು ಸದ್ಯದ ಪರಿಸ್ಥಿತಿಯಲ್ಲಿ ಖಾಸಗಿ ಬಸ್ ಮಾಲೀಕರು ಎದುರಿಸುತ್ತಿರುವ ಸಂಕಷ್ಟವನ್ನು ವಿವರಿಸಿದರಲ್ಲದೆ, ತೆರಿಗೆಯಲ್ಲಿ ವಿನಾಯಿತಿ ನೀಡುವಂತೆ ಮನವಿ ಮಾಡಿಕೊಂಡರು. ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ರಸ್ತೆ ದುರಸ್ತಿಯಾಗಲಿ ನಂತರ ನೋಡೋಣವೆಂದು ಹೇಳಿದ್ದಾರೆ.
ಭೇಟಿ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ, ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಕಾರ್ಯದರ್ಶಿ ಜನಾರ್ಧನ ಪ್ರಭು, ನಿರ್ದೇಶಕ ಜಗದೀಶ್ ಕಿಣಿ, ಯೋಗೇಶ್, ಮನ್ಸೂರ್, ಲೋಕೇಶ್ ಇದ್ದರು.