ಮಡಿಕೇರಿ, ಸೆ. 5: ಇತ್ತೀಚೆಗೆ ಬ್ರಾಹ್ಮಣರ ಸಂಘಗಳ ಒಕ್ಕೂಟವೊಂದು ರಚನೆಗೊಂಡಿದ್ದು, ಈ ಒಕ್ಕೂಟಕ್ಕೂ ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘಕ್ಕೂ ಯಾವದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿರುವ ಸಂಘದ ಜಿಲ್ಲಾಧ್ಯಕ್ಷ ಮಹಾಬಲೇಶ್ವರ ಭಟ್, ಒಕ್ಕೂಟ ರಚನೆ ಕೊಡಗು ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿಯ ವೈಯಕ್ತಿಕ ವಿಚಾರವಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಸುಮಾರು 12 ಸಾವಿರ ಮಂದಿ ಬ್ರಾಹ್ಮಣರಿದ್ದು, 6 ವರ್ಷಗಳ ಹಿಂದೆ ರಚನೆಯಾದ ಕೊಡಗು ಬ್ರಾಹ್ಮಣರ ಸಂಘದಲ್ಲಿ 400 ಮಂದಿ ಸದಸ್ಯರಿದ್ದಾರೆ. ಜಿಲ್ಲೆಯ ಮೂರೂ ತಾಲೂಕುಗಳಲ್ಲಿ ಸಂಘ ಚಟುವಟಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಬ್ರಾಹ್ಮಣರ ಸಂಘಗಳ ಒಕ್ಕೂಟ ರಚನೆಯ ಅಗತ್ಯವಿರಲಿಲ್ಲವೆಂದು ಅಭಿಪ್ರಾಯ ಪಟ್ಟರು.

ಕೊಡಗು ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿಯ ಬೆರಳೆಣಿಕೆ ಯಷ್ಟು ಮಂದಿ ಸೇರಿಕೊಂಡು ಒಕ್ಕೂಟವನ್ನು ರಚಿಸಿದ್ದಾರೆ. ಯಾವದೇ ಬ್ರಾಹ್ಮಣರ ಸಂಘಗಳ ಗಮನಕ್ಕೆ ಬಾರದೆ ಒಕ್ಕೂಟ ರಚನೆಯಾಗಿರುವದು ಅತ್ಯಂತ ವಿಷಾದನೀಯವೆಂದು ಮಹಾಬಲೇಶ್ವರ ಭಟ್ ಬೇಸರ ವ್ಯಕ್ತಪಡಿಸಿದರು.

ವಿದ್ಯಾಭಿವೃದ್ಧಿ ನಿಧಿಯ ಅಧೀನದಲ್ಲೇ ಎಲ್ಲಾ ಸಂಘಗಳು ಕಾರ್ಯ ನಿರ್ವಹಿಸಬೇಕೆನ್ನುವ ಉದ್ದೇಶದಿಂದ ಈ ರೀತಿ ಪ್ರತ್ಯೇಕ ಒಕ್ಕೂಟ ರಚಿಸಿಕೊಂಡಿರುವ ಬಗ್ಗೆ ಸಂಶಯವಿದೆ ಎಂದು ಆರೋಪಿಸಿದರು.

ಬ್ರಾಹ್ಮಣರ ಸಂಘದ ಯಾವದೇ ಸದಸ್ಯರು ನೂತನ ಒಕ್ಕೂಟದಲ್ಲಿ ಸದಸ್ಯತ್ವ ಪಡೆಯುವದಿಲ್ಲ, ಅನಿವಾರ್ಯವೆಂದಾದಲ್ಲಿ ರಾಜ್ಯ ವಿಪ್ರ ಮಹಾಸಭಾದ ಮೂಲಕ ಸದಸ್ಯತ್ವ ಪಡೆಯುವದಾಗಿ ಅವರು ಸ್ಪಷ್ಟಪಡಿಸಿದರು.

ಕೊಡಗು ಬ್ರಾಹ್ಮಣರ ಸಂಘ ಬ್ರಾಹ್ಮಣರ ಕಷ್ಟ, ಸುಖಗಳಿಗೆ ಸಕಾಲದಲ್ಲಿ ಸ್ಪಂದಿಸುತ್ತಿದ್ದು, ಅನ್ಯಾಯವಾದಾಗ ನ್ಯಾಯ ದೊರಕಿಸಿ ಕೊಡುವ ಕಾರ್ಯವನ್ನು ಕೂಡ ಮಾಡಿದೆ ಎಂದು ಮಹಾಬಲೇಶ್ವರ ಭಟ್ ಸಮರ್ಥಿಸಿಕೊಂಡರು.

ಬ್ರಾಹ್ಮಣರನ್ನು ಚೈತನ್ಯಗೊಳಿಸಲು ಹಾಗೂ ಉಳಿದ ಸಮಾಜದ ಏಳಿಗೆಗಾಗಿ ಕೋಟಿ ಗಾಯತ್ರಿ ಜಪ ಪಠಣ ಮತ್ತು ಪುನಶ್ಚರಣೆ ಯಾಗದ ಪೂರ್ಣಾಹುತಿ 2018 ಡಿ.30 ರಂದು ನಡೆಯಲಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು. ಸಂಘದ ಕುರಿತು ಹೆಚ್ಚಿನ ಮಾಹಿತಿಗಾಗಿ 8762846469, 9482876070 ಈ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

ಸಂಘದ ಕಾರ್ಯದರ್ಶಿ ಕೆ.ಎಸ್.ರಾಮಭಟ್, ಖಜಾಂಚಿ ಹೆಚ್.ಆರ್.ಮುರಳಿ, ಸದಸ್ಯರಾದ ಶ್ರೀಶಾ ಹಾಗೂ ರವಿಕುಮಾರ್ ಉಪಸ್ಥಿತರಿದ್ದರು.