ಮಡಿಕೇರಿ, ಸೆ. 5: ಪ್ರಕೃತಿ ವಿಕೋಪದಿಂದ ಕೊಡಗಿನ ಬೆಳೆಗಾರರು ಸಂಕಷ್ಟದಲ್ಲಿರುವದರಿಂದ ಮರದ ದಿಮ್ಮಿಗಳ ಸಾಗಾಟಕ್ಕೆ ನಿರ್ಬಂಧ ಹೇರಬಾರದೆಂದು ಸೋಮವಾರಪೇಟೆ ಕಾಫಿ ಬೆಳೆಗಾರರ ಸಂಘ ಮನವಿ ಮಾಡಿದೆ.
ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವ ಸಂಘದ ಅಧ್ಯಕ್ಷ ಬಿ.ಎಂ. ಮೋಹನ್ ಬೋಪಣ್ಣ ಮರದ ದಿಮ್ಮಿಗಳ ಸಾಗಾಟಕ್ಕೆ ನಿರ್ಬಂಧ ಹೇರಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಕಾಫಿ ಬೆಳೆಗಾಗರರು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಭಾರೀ ಗಾಳಿಗೆ ಸಿಲುಕಿ ತೋಟದ ಮರಗಳು ನೆಲಕ್ಕುರುಳಿವೆ. ಇವುಗಳ ಮಾರಾಟದಿಂದ ಮಾತ್ರ ಬೆಳೆಗಾರರು ಆರ್ಥಿಕ ಸ್ಥಿತಿಯನ್ನು ಸರಿದೂಗಿಸಿಕೊಳ್ಳಬಹುದಾಗಿದೆ ಎಂದು ಮೋಹನ್ ಬೋಪಣ್ಣ ಅಭಿಪ್ರಾಯಪಟ್ಟಿದ್ದಾರೆ.
ಮಳೆಗಾಲದಲ್ಲಿ ರಸ್ತೆಗಳು ಹದಗೆಡುತ್ತವೆ ಎನ್ನುವ ಕಾರಣಕ್ಕೆ ಆಗಸ್ಟ್ 31 ರವರೆಗೆ ಮರಗಳ ಸಾಗಾಟಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಆದರೆ ಇದೀಗ ಮತ್ತೆ ಎರಡು ತಿಂಗಳು ನಿರ್ಬಂಧವನ್ನು ವಿಸ್ತರಿಸಿದ್ದು, ಈ ಕ್ರಮದಿಂದಾಗಿ ಬೆಳೆಗಾರರು ಮಾತ್ರವಲ್ಲದೆ ಕಾರ್ಮಿಕರು ಹಾಗೂ ಜನಸಾಮಾನ್ಯರು ಕೂಡ ಕಷ್ಟ, ನಷ್ಟ ಅನುಭವಿಸಬೇಕಾಗುತ್ತದೆ. ಕಾಫಿ ಹಾಗೂ ಕರಿಮೆಣಸು ಮಹಾಮಳೆಗೆ ಸಂಪೂರ್ಣವಾಗಿ ನಾಶವಾಗಿದೆ. ಮರಗಳು ಬಿದ್ದಿರುವದರಿಂದ ಕಾಫಿ ಗಿಡಗಳು ನೆಲಕಚ್ಚಿವೆ. ಇಂತಹ ಪರಿಸ್ಥಿತಿಯಲ್ಲಿ ಬಿದ್ದಿರುವ ಮರಗಳು ಮಾತ್ರ ಬೆಳೆಗಾರರ ಸಹಾಯಕ್ಕೆ ಬರಲಿದ್ದು, ಇವುಗಳ ಸಾಗಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಬೇಕೆಂದು ಮೋಹನ್ ಬೋಪಣ್ಣ ಮನವಿ ಮಾಡಿದರು.
ಈ ಹಿಂದೆಯೇ ದಿಮ್ಮಿಗಳನ್ನಾಗಿ ಪರಿವರ್ತಿಸಿದ ಮರಗಳು ಶೀತ ವಾತಾವರಣದಿಂದ ಸಂಪೂರ್ಣ ವಾಗಿ ಹಾಳಾಗುವ ಆತಂಕ ವ್ಯಕ್ತಪಡಿಸಿರುವ ಅವರು ಜಿಲ್ಲಾಧಿಕಾರಿಗಳು ತಮ್ಮ ಆದೇಶವನ್ನು ಪುನರ್ ಪರಿಶೀಲಿಸಿ ಮರದ ದಿಮ್ಮಿಗಳ ಸಾಗಾಟಕ್ಕೆ ಅವಕಾಶ ನೀಡಬೇಕೆಂದರು.