*ಗೋಣಿಕೊಪ್ಪಲು, ಸೆ. 5: ಕೊಡಗಿನ ಮಳೆಹಾನಿಯಿಂದ ಸಂಕಷ್ಟಕ್ಕೆ ಒಳಗಾದ ಗಿರಿಜನ ಕುಂಟುಬವನ್ನು ಗುರುತಿಸಿ ಅವರಿಗೆ ಆರ್ಥಿಕವಾಗಿ ನೆರವಾಗಲು ರಾಜ್ಯ ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆ ವತಿಯಿಂದ ಸರ್ವೆ ಕಾರ್ಯ ಆರಂಭಗೊಂಡಿದೆ.
ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆಯ ನಿರ್ದೇಶಕ ಸಂಗಪ್ಪ ಅವರ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಸರ್ವೆ ಕಾರ್ಯದಲ್ಲಿ ಬುಧವಾರ ತಿತಿಮತಿ ಸುತ್ತಮುತ್ತಲಿನ ಗಿರಿಜನ ಹಾಡಿಗಳಾದ ಕಾರೆಕಂಡಿ, ಮಜ್ಜಿಗೆಹಳ್ಳ, ಆನೆಕ್ಯಾಂಪ್, ರೇಷ್ಮೆಹಡ್ಲು, ದೇಚಮಚ್ಚಿ, ಚೇಣಿ ಹಡ್ಲು ಮೊದಲಾದ ಭಾಗಗಳಿಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಖುದ್ದು ಪರಿಶೀಲಿಸಿ ದಾಖಲು ಪಡಿಸಿಕೊಳ್ಳಲಾಯಿತು.
ಮಳೆಯಿಂದ ತೀವ್ರ ಹಾನಿಗೆ ಒಳಗಾಗಿರುವ ಮಡಿಕೇರಿ ತಾಲೂಕಿನ ಮದೆ, ಮೊಣ್ಣಂಗೇರಿ, ಜೋಡುಪಾಲ ಭಾಗಗಳಿಗೆ ಭೇಟಿ ನೀಡಿದ ತಂಡ, ಜೀವ ಹಾನಿ, ಮನೆಮಠ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡ ಕುಟುಂಬಗಳ ಬಗ್ಗೆ ಮಾಹಿತಿ ಕಲೆ ಹಾಕಿತು. ಜತೆಗೆ ವೈಯಕ್ತಿಕ ಸಮಸ್ಯೆ, ಆರ್ಥಿಕ ಸ್ಥಿತಿಗತಿ, ಮಕ್ಕಳ ಶಿಕ್ಷಣ ಸಮಸ್ಯೆ ಮೊದಲಾದವಗಳ ಬಗೆಗೂ ಮಾಹಿತಿ ಪಡೆದುಕೊಂಡಿತು.
ತಿತಿಮತಿಯಲ್ಲಿ ಮಾತನಾಡಿದ ವೀರಾಜಪೇಟೆ ತಾಲೂಕು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಶೇಖರ್, ಮಳೆ ಹಾನಿಯಿಂದ ಗಿರಿಜನರಿಗೆ ಎದುರಾದ ಎಲ್ಲಾ ರೀತಿಯ ಸಮಸ್ಯೆಗಳ ಬಗ್ಗೆ ಸರ್ವೆ ಕಾರ್ಯ ನಡೆಸಿ ಸಮಗ್ರ ಯೊಜನೆ ತಯಾರಿಸಲು ಸರಕಾರ ನಿರ್ದೇಶನ ನೀಡಿದೆ. ಜಿಲ್ಲೆಯ ಎಲ್ಲಾ ಭಾಗದ ಗಿರಿಜನರನ್ನು ಭೇಟಿ ಮಾಡಿ ವರದಿ ತಯಾರಿಸಲಾಗುತ್ತಿದೆ. ಸಂಕಷ್ಟಕ್ಕೆ ಒಳಗಾದವರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬಹುದಾಗಿದೆ ಎಂಬದರ ಬಗೆಗೂ ವರದಿಯಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದರು.
ಮನೆಗಳನ್ನು ನಿರ್ಮಿಸಿಕೊಡು ವದು, ಜಾನುವಾರು ಸಾಕಣೆ, ಕೌಶಲ್ಯ ಅಭಿವೃದ್ಧಿ ತರಬೇತಿ ಮೊದಲಾದವ ಗಳನ್ನು ನೀಡುವ ಬಗೆಗೂ ಚಿಂತಿಸಲಾಗುತ್ತಿದೆ ಎಂದು ಹೇಳಿದರು.
ಕೂಲಿಯನ್ನೇ ನಂಬಿರುವ ಗಿರಿಜನರಿಗೆ ಆರ್ಥಿಕ ಸಹಾಯ ಮಾಡುವದರ ಬಗೆಗೂ ಪ್ರಸ್ತಾಪಿಸಲಾಗುವದು. ಮಂಗಳವಾರ ನಾಗರಹೊಳೆ ಅರಣ್ಯದ ಹಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಇನ್ನೂ ಒಂದುವಾರಗಳ ಕಾಲ ಸರ್ವೆ ಕಾರ್ಯ ನಡೆಯಲಿದೆ. ಬಳಿಕ ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವದು ಎಂದು ತಿಳಿಸಿದರು. ಜಿಲ್ಲಾ ಐಟಿಡಿಪಿ ಅಧಿಕಾರಿ ಶಿವಕುಮಾರ್, ಮೈಸೂರಿನ ಗಿರಿಜನ ಸಂಶೋಧನಾ ಶಿಕ್ಷಣ ಸಂಸ್ಥೆಯ 15 ಮಂದಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಚಿತ್ರ ವರದಿ: ಎನ್.ಎನ್. ದಿನೇಶ್