ಮೇಘತ್ತಾಳು... ಬಹುಶಃ ಈ ಊರಿನ ಹೆಸರನ್ನು ಮೊನ್ನೆಮೊನ್ನೆವರೆಗೂ ಕೇಳಿದ ಮಂದಿ ಬಹಳ ಕಡಿಮೆ. ಮಾಂದಲಪಟ್ಟಿ ರಸ್ತೆ ಅಥವಾ, ಮಕ್ಕಂದೂರು-ತಂತಿಪಾಲ ರಸ್ತೆಯಲ್ಲಿ ಎಂಟತ್ತು ಕಿಲೋ ಮೀಟರ್ ದೂರ ಸಾಗಿದರೆ ಸಿಗುವ ಊರೇ ಈ ಮೇಘತ್ತಾಳು.. ಹೆಸರಿನಂತೆ ಈ ಊರೂ ಕೂಡ ಸದಾ ಮೇಘಚ್ಛಾದಿತ, ಹಸಿರ ಹೊದಿಕೆಯಲ್ಲಿ ತಣ್ಣಗೆ ಮಲಗಿರುವ ಪುಟ್ಟ ಗ್ರಾಮ. ಸುತ್ತಲೂ ಬೆಟ್ಟಗುಡ್ಡಗಳು, ಮಧ್ಯದಲ್ಲಿ ವಿಶಾಲ ಗದ್ದೆ ಬಯಲುಗಳುಳ್ಳ ಬಹು ಸುಂದರ ಗ್ರಾಮವಿದು. ಇಂದಿಗೂ ಭತ್ತದ ಕೃಷಿಯನ್ನು ಚಾಚೂ ತಪ್ಪದೆ ಪಾಲಿಸುತ್ತಾ ಪ್ರಕೃತಿಯ ಮಕ್ಕಳಾಗಿಯೇ ದುಡಿದು ಬದುಕು ಕಟ್ಟಿಕೊಂಡವರು. ಇದನ್ನು ಕುಗ್ರಾಮ ಎಂದರೂ ತಪ್ಪಲ್ಲ. ಏಕೆಂದರೆ ಈ ಊರಿಗೆ ಇಂದಿಗೂ ಬಸ್ ಸೌಲಭ್ಯವಿಲ್ಲ. ರಸ್ತೆ ಕಂಡಿದ್ದೇ ಇತ್ತೀಚಿನ ಕೆಲವು ವರ್ಷಗಳ ಹಿಂದೆ. ಬೆಟ್ಟದ ತಪ್ಪಲಿನಲ್ಲಿ, ಗದ್ದೆಗಳ ಬದಿಯಲ್ಲಿ ಮನೆಕಟ್ಟಿಕೊಂಡು ತಮ್ಮದೇ ಆದ ಪ್ರಪಂಚದಲ್ಲಿ ಬದುಕುತ್ತಿದ್ದವರು ಈ ಮಂದಿ. ಆಗಸ್ಟ್ 16ರವರೆಗೂ ಇಲ್ಲಿ ಎಲ್ಲವೂ ಸಹಜವಾಗಿಯೇ ಇತ್ತು.... ಆದರೆ ಆ ಕರಾಳ ರಾತ್ರಿ... ಭೂಮಿಯೊಳಗೆ ಅದೇನು ನಡೆದು ಹೋಗಿತ್ತೋ ಏನೋ... ಬಾಂಬ್‍ನಂತೆ ಸ್ಪೋಟಿಸಿದ್ದ ಪರ್ವತಗಳು ನೋಡ ನೋಡುತ್ತಿದ್ದಂತೇ ಆ ಊರಿನ ಮನೆ, ತೋಟ, ಗದ್ದೆಗಳನ್ನು ಕೊಚ್ಚಿಕೊಂಡು ಹುಚ್ಚು ಹೊಳೆಯಾಗಿ ಹರಿಯಲಾರಂಭಿಸಿತ್ತು. ಕೆಲವೇ ಕೆಲವು ನಿಮಿಷಗಳಲ್ಲಿ ಆ ಇಡೀ ಊರೇ ಸ್ಮಶಾನವಾಗಿಬಿಟ್ಟಿತ್ತು.

ಆ ಕರಾಳ ದಿನ

ಆಗಸ್ಟ್ 16... ಈ ಊರಿನ ಜನರ ಪಾಲಿಗೆ ಎಂದೆಂದಿಗೂ ಕರಾಳವಾಗಿ ಉಳಿಯುವ ದಿನ.... ಕಣ್ಣೆದುರಿನ ಬೆಟ್ಟಗಳು ನೋಡ ನೋಡುತ್ತಿದ್ದಂತೇ ಆ ಊರಿನ ಮೇಲೆ ಕೊಚ್ಚಿಕೊಂಡು ಹೋಗಿ ಸರ್ವನಾಶ ಮಾಡಿದ ದಿನ.

ಈ ಘಟನೆ ಆದ ಬಳಿಕ ಸಂಕಷ್ಟದಲ್ಲಿ ಸಿಲುಕಿದ್ದ 100ಕ್ಕೂ ಅಧಿಕ ಮಂದಿ ಸಹಾಯಕ್ಕಾಗಿ ಎರಡು ದಿನಗಳ ಕಾಲ ಜಡಿ ಮಳೆಯಲ್ಲಿ ನೆನೆಯುತ್ತಲೇ ಕಾದಿದ್ದಾರೆ. ರಕ್ಷಣೆಗೆ ಹೆಲಿಕಾಫ್ಟರ್ ಬರಲಿದೆಯಂತೆ ಎಂದು ಯಾರೋ ಮಹಾಶಯ ಹೇಳಿದ್ದನ್ನು ನಂಬಿ ಪ್ರಾಣ ಕೈಯಲ್ಲಿ ಹಿಡಿದು ಕಾದಿದ್ದಾರೆ. ಆದರೆ ಹೆಲಿಕಾಫ್ಟರ್ ಹೋಗಲಿ, ಯಾವೊಬ್ಬ ರಕ್ಷಣಾ ಸಿಬ್ಬಂದಿ ಇಂದಿಗೂ ಕೂಡ ಆ ಊರಿಗೆ ತಲುಪಿಲ್ಲ. ಇನ್ನೂ ಸಹಾಯಕ್ಕಾಗಿ ಕಾದು ಕುಳಿತರೆ ಸಾವೊಂದೇ ಗತಿ ಎಂದು ಅರಿತ ಕೆಲವರು ಧೈರ್ಯ ಮಾಡಿ ಹೆಂಗಸರು ಮಕ್ಕಳನ್ನು ಕಟ್ಟಿಕೊಂಡು ನಡೆಯಲಾರಂಭಿಸಿದ್ದಾರೆ. ಆದರೆ ಎಲ್ಲಿ ಹೋದರೂ ತುಂಡಾದ ರಸ್ತೆಗಳು, ಕೊಚ್ಚಿ ಹೋದ ಭೂಮಿ, ಆಳ ಪ್ರಪಾತ, ಭೀಕರ ಪ್ರವಾಹ, ರಣ ಮಳೆ, ಗಾಳಿ ಇವರನ್ನು ಜೀವಂತ ಶವವನ್ನಾಗಿಸಿತ್ತು. ನಾವೆಲ್ಲಾ ಬದುಕಿ ಉಳಿಯುವದೇ ಇಲ್ಲ ಎಂದು ಎಲ್ಲರೂ ಭಾವಿಸಿದ್ದರು. ಮುಖ್ಯರಸ್ತೆಯಲ್ಲಿ ತೆರಳಲು ಅಸಾಧ್ಯ ಎಂದರಿವಾದಾಗ ಬೆಟ್ಟ ಗುಡ್ಡಗಳನ್ನು ಹತ್ತಿ ಇಳಿದು 14 ಕಿಲೋ ಮೀಟರ್ ಕರಾಳ ರಾತ್ರಿಯಲ್ಲಿ ನಡೆದು ಕೊನೆಗೂ ಹೆಬ್ಬಟ್ಟಗೇರಿ ಸೇರುವಲ್ಲಿ ಯಶಸ್ವಿಯಾದರು.

ಕಣ್ಣೆದುರೇ ಕೊಚ್ಚಿ ಹೋದ ಗುಡ್ಡ

ಹೆಬ್ಬಟ್ಟಗೇರಿ ತಲುಪಿದ ಇವರನ್ನು ಅಲ್ಲಿ ಪೊಲೀಸರು ತಡೆದು ಮುಂದೆ ಹೋದರೆ ಅಪಾಯವಿದೆ ಇಲ್ಲೇ ಇರಿ ಎಂದು ಸೂಚಿಸಿದ್ದಾರೆ. ಆದರೆ ಅದಕ್ಕೆ ಒಪ್ಪದ ಊರಿನ ಜನ ಇಲ್ಲಿದ್ದರೆ ಸಾಯುವದು ಖಂಡಿತ, ನಾವು ನಡೆದೇ ಮಡಿಕೇರಿ ಸೇರುತ್ತೇವೆ ಎಂದು ಹೇಳಿ ಕೆಲವೇ ಹೆಜ್ಜೆ ಮುಂದಿಟ್ಟಿದ್ದಾರೆ ಅಷ್ಟೆ. ಬೃಹತ್ ಪರ್ವತವೊಂದು ಸಾವಿರಾರು ಮರಗಳನ್ನು ಬಂಡೆಕಲ್ಲುಗಳನ್ನು ರಭಸದಿಂದ ತಳ್ಳುತ್ತಾ ಇವರತ್ತಲೇ ಬರಲಾರಂಭಿಸಿತ್ತು. ಇದನ್ನು ನೋಡಿದ ಮಂದಿಗೆ ಜೀವಭಯದಿಂದ ಕಿರುಚುವದು ಬಿಟ್ಟರೆ ಬೇರೇನೂ ದಾರಿ ಇರಲಿಲ್ಲ. ಕೆಲವು ಮಂದಿ ಕೈಕಾಲು ನಡುಗಿ ಅಲ್ಲೇ ಕುಸಿದಿದ್ದಾರೆ. ಆದರೆ ಇವರ ಅದೃಷ್ಟ; ಯಮಸ್ವರೂಪಿಯಾಗಿ ಬಂದ ಆ ಪರ್ವತ, ಗದ್ದೆ ಬಯಲಿನಲ್ಲಿ ಹರಡಿ ಅಲ್ಲೇ ಶಾಂತವಾಗಿದೆ. ಇವರ ಕಾಲ ಬುಡದ ವರೆಗೂ ಗುಡ್ಡದ ಮಣ್ಣು ಬಂದು ಬಿದ್ದಿದೆ.

``ಕೂದಲೆಳೆ ಅಂತರದಲ್ಲಿ ನಾವು ಸಾವಿನಿಂದ ಪಾರಾದೆವು. ಎಲ್ಲಾ ಮುಗಿಯಿತು, ನಾವು ಸತ್ತೇ ಹೋದೆವು ಅಂದುಕೊಂಡಿದ್ದೆ. ಒಂದು ವೇಳೆ ಅಲ್ಲಿ ಗದ್ದೆ ಇಲ್ಲದೇ ಇದ್ದಿದ್ದಲ್ಲಿ ಅಷ್ಟೂ ಮಣ್ಣು ನಮ್ಮ ನೂರು ಜನರನ್ನೂ ಮುಚ್ಚಿ ಬಿಡುತ್ತಿತ್ತು. ಬೆಟ್ಟದ ಮೇಲಿನಿಂದ ಬೃಹತ್ ಮರಗಳು ಚಿತ್ರವಿಚಿತ್ರವಾಗಿ ನರ್ತನ ಮಾಡುತ್ತಾ ನಮ್ಮತ್ತ ಜಾರಿ ಬರುತ್ತಿದ್ದ ಆ ದೃಷ್ಯ ಕಲ್ಪಿಸಿಕೊಂಡರೆ ಈಗಲೂ ನನ್ನೆದೆ ನಡುಗುತ್ತದೆ'' ಎಂದು ಹೇಳುತ್ತಾರೆ ಬಹಳಷ್ಟು ಜನರನ್ನು ರಕ್ಷಿಸಿ ಕರೆತಂದ ಇದೇ ಊರಿನ ತಂಬುಕುತ್ತೀರಾ ನವೀನ್.

ಬಾಣಂತಿ ತಾಯಿ ಮಗು ದುರಂತ ಸಾವು

ಇದೇ ಮೇಘತಾಳುವಿನಲ್ಲಿದ್ದ ಎರಡು ತಿಂಗಳ ಹಸುಗೂಸು ಮತ್ತು ಅದರ ಬಾಣಂತಿ ತಾಯಿ ಕೂಡ ಈ ನೂರು ಜನರೊಂದಿಗೆ ಜಡಿ ಮಳೆಯಲ್ಲಿ 14 ಕಿಲೋ ಮೀಟರ್ ನಡೆದಿದ್ದಾರೆ. ಆದರೆ ಹಸಿ ಮೈಯ ಆ ಬಾಣಂತಿ ಮತ್ತು ಹಸುಗೂಸು ಪ್ರಕೃತಿಯ ರುದ್ರ ಹೊಡೆತ ತಾಳಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹಾಗಾಗಿ ಆ ಎರಡು ಮುಗ್ಧ ಜೀವಗಳು ದಾರಿ ಮಧ್ಯದಲ್ಲೇ ಕಣ್ಣುಚ್ಚುತ್ತವೆ ಎಂದು ಗದ್ಗಧಿತರಾಗುತ್ತಾರೆ ನವೀನ್...ಹೀಗೆ ಮೇಘತಾಳುವಿನಲ್ಲಿ ಸಂಭವಿಸಿದ ಘಟನೆಗಳು ಘನಘೋರ..

ಇಂದು ಹೇಗಿದೆ ಮೇಘತ್ತಾಳು

ಅಂದು ರಮಣೀಯ ಪ್ರಕೃತಿ ಮಡಿಲಲ್ಲಿದ್ದ ಮೇಘತಾಳು ಇಂದು ಅಕ್ಷರಶಃ ಸ್ಮಶಾನದಂತಿದೆ. ಅವರ ವಿಶಾಲ ಗದ್ದೆ ಬಯಲುಗಳ ಮೇಲೆ ಏನಿಲ್ಲ ವೆಂದರೂ ಐದರಿಂದ ಹತ್ತು ಅಡಿ ಮರಳಿನ ರಾಶಿ ನಿಂತಿದೆ. ನಾವೆಲ್ಲೋ ಸಮುದ್ರ ತೀರದಲ್ಲಿ ನಿಂದಿದ್ದೇವೆ ಏನೋ ಎಂಬಂತೆ ಭಾಸವಾಗುತ್ತದೆ. ಇನ್ನೆಂದಿಗೂ ಆ ಭೂಮಿಯಲ್ಲಿ ನಾಟಿ ಮಾಡುವದು ಸಾಧ್ಯವಾಗುವದಿಲ್ಲ. ಬೆಟ್ಟದ ತಪ್ಪಲಿನಲ್ಲಿದ್ದ ನೂರಾರು ಏಕರೆ ಕಾಫಿ ತೋಟ ಸರ್ವನಾಶವಾಗಿದೆ. ಮಣ್ಣಿನ ರಾಶಿ ಬಹಳಷ್ಟು ಮನೆಗಳನ್ನು ಮುಚ್ಚಿ ಬಿಟ್ಟಿವೆ. ಆ ವಿಶಾಲ ಗದ್ದೆ ಬಯಲುಗಳ ಮೇಲೆ ಸತತ ಒಂದು ವಾರಗಳ ಕಾಲ ಭಾರೀ ಪ್ರವಾಹ ಹರಿದಿದೆ. ಇತಿಹಾಸದಲ್ಲಿ ಕಂಡುಕೇಳರಿಯದಷ್ಟು ಆ ಪ್ರವಾಹ ಘನಘೋರವಾಗಿತ್ತು. ಪ್ರವಾಹದ ವೇಳೆ ಲಕ್ಷಾಂತರ ಮರದ ದಿಮ್ಮಿಗಳು ಕೊಚ್ಚಿ ಬಂದು ಗದ್ದೆ ಬಯಲಿನಲ್ಲಿ ಹರಡಿ ಹೋಗಿವೆ. ಯಾವದೋ ಬೃಹತ್ ಟಿಂಬರ್ ಯಾರ್ಡ್‍ನಲ್ಲಿ ನಾವು ನಿಂತಿದ್ದೇವೆಯೋ ಏನೋ ಎಂಬಂತೆ ಭಾಸವಾಗುತ್ತದೆ. ಆ ಮರಗಳ ರಾಶಿ ಮಧ್ಯೆ ಕೊಚ್ಚಿಕೊಂಡು ಬಂದಿರುವ ಕಾರಿನ ದುಸ್ಥಿತಿ ಪ್ರಕೃತಿಯ ರೌದ್ರತೆಗೆ ಕನ್ನಡಿ ಹಿಡಿಯುತ್ತದೆ.

ಈ ಊರಿಗೆ ಸಂಪರ್ಕ ಕಲ್ಪಿಸುವ ಮಾಂದಲಪಟ್ಟಿ ರಸ್ತೆ ಮತ್ತು ತಂತಿ ಪಾಲ ರಸ್ತೆ ಎರಡೂ ಕೂಡ ಪ್ರವಾಹ ಮತ್ತು ಭೂಕುಸಿತದಲ್ಲಿ ಕೊಚ್ಚಿ ಹೋಗಿವೆ. ತಂತಿಪಾಲ ಸೇತುವೆ ವಾಹನ ಸಂಚರಿಸುವ ಸ್ಥಿತಿಯಲ್ಲಿಲ್ಲ. ಈ ಗ್ರಾಮಕ್ಕೆ ರಸ್ತೆ ಸಂಪರ್ಕ ಮರುಸ್ಥಾಪನೆಯಾಗಲು ಇನ್ನು ಅದೆಷ್ಟು ವರ್ಷಗಳು ಬೇಕೋ ಏನೋ.

ಇನ್ನೂ ಮುಗಿದಿಲ್ಲ ಅಪಾಯ

ಮೇಘತ್ತಾಳು ಗ್ರಾಮದಲ್ಲಿ ಈ ದುರಂತ ಈ ವರ್ಷಕ್ಕೆ ಕೊನೆಯಾಗಿದೆ ಎಂದು ಹೇಳುವಂತಿಲ್ಲ. ಇನ್ನೂ ಕೂಡ ಬಹಳಷ್ಟು ಪರ್ವತಗಳು ಬೃಹತ್ ಪ್ರಮಾಣದಲ್ಲಿ ಬಿರುಕು ಬಿಟ್ಟು ಕೂತಿವೆ. ಮುಂದಿನ ವರ್ಷ ಮತ್ತೆ ಮಳೆ ಜಾಸ್ತಿಯಾದರೆ ಈ ಬೆಟ್ಟಗಳು ಕುಸಿಯುವ ಸಾಧ್ಯತೆ ಇದೆ. ಹಾಗಾಗಿ ಇಲ್ಲಿ ಯಾರಿಗೂ ಕೂಡ ಬದುಕುವ ಧೈರ್ಯವಿಲ್ಲ. ಒಂದೋ ಎರಡೋ ಕುಟುಂಬಗಳು ಧೈರ್ಯ ಮಾಡಿ ಊರಿಗೆ ತೆರಳಿ ಪಶು ಪ್ರಾಣಿಗಳಿಗೆ ಅನ್ನಾಹಾರ ಹಾಕಿ ಹಿಂದಿರುಗುತ್ತಿವೆ. ಆದರೆ ಶಾಶ್ವತವಾಗಿ ಬದುಕುವ ಧೈರ್ಯ ಇವರಿಗಿಲ್ಲ. ಒಂದಷ್ಟು ಜಮೀನು, ಮನೆ ಕಟ್ಟಿಸಿಕೊಡಿ ಎಲ್ಲಾದರೂ ನಾವು ಬದುಕಿಕೊಳ್ಳುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.

ಹಿಂಬಾಲಿಸಿ ಬಂದ ಮುಗ್ಧನಾಯಿ

ಮೇಘತ್ತಾಳು ಗ್ರಾಮಕ್ಕೆ ಘಟನೆ ನಡೆದಾಗಿನಿಂದ ಇದುವರೆಗೆ ಯಾವದೇ ಒಬ್ಬ ರಕ್ಷಣಾ ಸಿಬ್ಬಂದಿ, ಅಧಿಕಾರಿಗಳು ಅಥವಾ ಮಾಧ್ಯಮಗಳು ಭೇಟಿ ನೀಡಿರಲಿಲ್ಲ. ಕಳೆದ 15 ದಿನಗಳಿಂದ ಆ ಗ್ರಾಮ ನಿರ್ಮಾನುಷ್ಯವಾಗಿತ್ತು. ಸದಾ ಮಾನವನೊಂದಿಗೇ ಬದುಕುವ ಸಾಕು ಪ್ರಾಣಿಗಳು ಕಳೆದ 15 ದಿನಗಳಿಂದ ಮನುಷ್ಯರನ್ನೇ ಕಾಣದೆ ಆಘಾತಕ್ಕೊಳಗಾಗಿವೆ. ಅದರಲ್ಲೂ ಡ್ಯಾಶ್‍ಹೂಂಡ್ ಮಿಶ್ರ ತಳಿಯ ನಾಯಿ ಮರಿಯೊಂದು ಮಂಕಾಗಿ ಕುಳಿತಿತ್ತು. ಮಾಧ್ಯಮದ ಮಂದಿ ಈ ನಾಯಿಗೆ ಸ್ವಲ್ಪ ಬಿಸ್ಕೆಟ್, ಪೆಡಿಗ್ರಿ ಕೊಟ್ಟಾಕ್ಷಣ ಜೀವ ಬಂದಂತಾದ ಆ ನಾಯಿ ಪತ್ರಕರ್ತರನ್ನು ಹಿಂಬಾಲಿಸಿ ಬರಲಾರಂಭಿಸಿತ್ತು. ಇವರ ಜೊತೆಯೇ ಸುಮಾರು ಆರು ಕಿಲೋ ಮೀಟರ್ ದೂರ ಹಿಂಬಾಲಿಸಿ ಬಂದ ಆ ನಾಯಿ ಇದೀಗ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದು, ಹೊಸ ಉತ್ಸಾಹ ಪಡೆದುಕೊಂಡಿದೆ.

- ಐಮಂಡ ಗೋಪಾಲ್ ಸೋಮಯ್ಯ, ಮರಗೋಡು