ಮಡಿಕೇರಿ, ಸೆ.5 : ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಜನತೆಗೆ, ಜಿಲ್ಲೆಯ ಶಾಸಕರುಗಳೊಂದಿಗೆ ಸಂತರು ಬಿರುಸಿನ ಪ್ರವಾಸ ಹಮ್ಮಿಕೊಂಡು ಸಾಂತ್ವನ ಹೇಳಿದರು. ಅಲ್ಲದೆ ಗ್ರಾಮೀಣ ಜನತೆಯ ಕುಂದುಕೊರತೆ ಪರಿಶೀಲಿಸಿ ಸರಕಾರ ಮತ್ತು ಜಿಲ್ಲಾಡಳಿತದಿಂದ ಸೂಕ್ತ ನೆರವಿನ ಭರವಸೆ ನೀಡಿದರು.ಶಾಸಕತ್ರಯರಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ , ಸುನಿಲ್ ಸುಬ್ರಮಣಿ ಅವರುಗಳು ಜಿಲ್ಲೆಯ ಪ್ರಾಕೃತಿಕ ವಿಕೋಪ ಸ್ಥಳಗಳಿಗೆ ತೆರಳಿ ಪರಿಶೀಲಿಸಿದರು. ಬೋಪಯ್ಯ ಅವರು ಹೆಬ್ಬೆಟ್ಟಗೇರಿ, ಕಾಲೂರು, ನಿಡುವಟ್ಟು , ಮೊಣ್ಣಂಗೇರಿ ಹಾಗೂ ಇತರೆಡೆಗಳಲ್ಲಿ ತೆರಳಿ ಜನತೆಯ ಅಹವಾಲುಗಳನ್ನು ಆಲಿಸಿದರು. ಪ್ರಾಕೃತಿಕ ವಿಕೋಪದಿಂದ ತಮ್ಮ ಆಸ್ತಿ - ಪಾಸ್ತಿ ಕಳೆದುಕೊಂಡಿದ್ದರೂ ಮನೆಗಳನ್ನು ತೊರೆಯದೆ ಗ್ರಾಮಗಳಲ್ಲೇ ಜಾನುವಾರುಗಳೊಂದಿಗೆ ನೆಲೆಸಿದ್ದ ಕುಟುಂಬಗಳಿಗೆ ಅವರು ಧೈರ್ಯ ತುಂಬಿದರು. ಅಪ್ಪಚ್ಚುರಂಜನ್: ಇನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು, ಬಿರುಸಿನ ಪ್ರವಾಸದೊಂದಿಗೆ, ಮಾದಾಪುರ, ಕುಂಬೂರು, ನಂದಿಮೊಟ್ಟೆ, ಕಿರುಗಂದೂರು, ತಾಕೇರಿ,
(ಮೊದಲ ಪುಟದಿಂದ) ಗರ್ವಾಲೆ, ಶಿರಂಗಳ್ಳಿ ಮುಂತಾದೆಡೆಗಳಲ್ಲಿ ಜನಾಭಿಪ್ರಾಯ ಪಡೆದರು. ಶಿರಂಗಳ್ಳಿ - ಗರ್ವಾಲೆ ನಡುವೆ ಭಾರೀ ಭೂಕುಸಿತದಿಂದ ಸಂಪರ್ಕ ಕಡಿದುಕೊಂಡಿರುವ ರಸ್ತೆಯಲ್ಲಿನ ಮಣ್ಣನ್ನು ಖುದ್ದು ನಿಂತು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಸೂರ್ಲಬ್ಬಿಗೆ ತೆರಳಬೇಕಿದ್ದ ಶಾಲಾ ಶಿಕ್ಷಕರುಗಳಿಗೆ ಬಸ್ ವ್ಯವಸ್ಥೆಯಿಲ್ಲದೆ, ತೊಂದರೆಗೆ ಸಿಲುಕಿದ್ದನ್ನು ಗಮನಿಸಿದ ಅವರು, ಬಳಸು ದಾರಿಯಲ್ಲಿ ಸೂರ್ಲಬ್ಬಿ ಶಾಲೆಗೆ ತಲಪಿಸಿದರು.
ಅಂಗನವಾಡಿಗಳ ಭೇಟಿ: ಶಿರಂಗಳ್ಳಿಯಲ್ಲಿ ಮಣ್ಣು ಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿರುವ ಕಾರ್ಯವನ್ನು ಇನ್ನೆರಡು ದಿನಗಳಲ್ಲಿ ಪೂರೈಸಿದ ಬಳಿಕ, ಶಾಲಾ - ಕಾಲೇಜು ಮಕ್ಕಳ ಸಹಿತ ಶಿಕ್ಷಕರ ಅನುಕೂಲಕ್ಕಾಗಿ, ಜಿಲ್ಲಾಧಿಕಾರಿಗಳ ಗಮನ ಸೆಳೆದು ಮಿನಿ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಈ ವೇಳೆ ಶಾಸಕರು ನೀಡಿದರು. ಅಲ್ಲಿಂದ ಮುಟ್ಲು ಅಂಗನವಾಡಿಗೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು.
ಅಲ್ಲಲ್ಲಿ ಸಾಂತ್ವನ: ಮುಟ್ಲುವಿನಿಂದ ಹಮ್ಮಿಯಾಲ, ಹಚ್ಚಿನಾಡು, ಕಾಲೂರು, ನಿಡುವಟ್ಟು, ಬಾರಿಬೆಳ್ಳಚ್ಚು, ಹೆಬ್ಬೆಟ್ಟಗೇರಿ, ಗಾಳಿಬೀಡು, ವಣಚಲು ಮುಂತಾದೆಡೆಗಳಲ್ಲಿ ಪ್ರವಾಸ ಕೈಗೊಂಡು ಅಲ್ಲಿನ ನಿವಾಸಿಗಳಿಗೆ ಧೈರ್ಯ ತುಂಬಿದ ಶಾಸಕರು, ಮುಕ್ಕೋಡ್ಲು ರಸ್ತೆಯಲ್ಲಿ ಮಣ್ಣು ತೆರವು ಕಾರ್ಯಾಚರಣೆ ವೀಕ್ಷಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಹಟ್ಟಿಹೊಳೆ - ಹಮ್ಮಿಯಾಲ ಮಾರ್ಗದ ಸಂಚಾರ ಸಾಧ್ಯವಾಗದಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಕರ್ಣಂಗೇರಿ: ಕರ್ಣಂಗೇರಿ - ಹೆಬ್ಬೆಟ್ಟಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಿ.ಪಂ. ಸದಸ್ಯೆ ಯಾಲದಾಳು ಪದ್ಮಾವತಿ, ತಾ.ಪಂ. ಸದಸ್ಯ ರಾಯ್ ತಮ್ಮಯ್ಯ ಹಾಗೂ ಅಲ್ಲಿನ ಪ್ರತಿನಿಧಿಗಳ ಜತೆಗೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಾದ ಗವಿಸಿದ್ಧಯ್ಯ, ಚನ್ನಕೇಶವ, ಭೂಮಾಪನ ಇಲಾಖಾ ಅಧಿಕಾರಿಗಳ ಜತೆಗೂ ಕೆಲಸಗಳ ಬಗ್ಗೆ ಚರ್ಚಿಸಿದ ಅಪ್ಪಚ್ಚುರಂಜನ್ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಂತೆ ತಿಳಿಹೇಳಿದರು.
ಹೆದ್ದಾರಿ ವೀಕ್ಷಣೆ: ಇಲ್ಲಿನ ಮಂಗಳೂರು ರಸ್ತೆಯ ಅಲ್ಲಲ್ಲಿ, ಕುಸಿದಿರುವ ಹೆದ್ದಾರಿಯ ದುರಸ್ತಿ ಕಾಮಗಾರಿ, 2ನೇ ಮೊಣ್ಣಂಗೇರಿ ಹಾಗೂ ಮದೆನಾಡು, ಜೋಡುಪಾಲ ವ್ಯಾಪ್ತಿಯ ಸಂಪರ್ಕವಿರುವೆಡೆಗಳಲ್ಲಿ ಸಂಚರಿಸಿದ ಅವರು, ಆದಷ್ಟು ಬೇಗ ಹೆದ್ದಾರಿ ವಾಹನಗಳ ಸಂಪರ್ಕದೊಂದಿಗೆ ಬಸ್‍ಗಳ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದರು.
ಶಾಸಕರೊಂದಿಗೆ ತಾ.ಪಂ. ಸದಸ್ಯ ರಾಯ್ ತಮ್ಮಯ್ಯ, ಅಧಿಕಾರಿ ಗವಿಸಿದ್ಧಯ್ಯ, ಮಾದಾಪುರ ಗ್ರಾ.ಪಂ. ಅಧ್ಯಕ್ಷ ನಾಪಂಡ ಉಮೇಶ್, ಗಾಳಿಬೀಡು ಗ್ರಾ.ಪಂ. ಸದಸ್ಯ ಎ.ಪಿ. ಧನಂಜಯ್ ಸೇರಿದಂತೆ ಇತರರು ಹಾಜರಿದ್ದು, ಆಯಾ ಭಾಗದ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಸುನಿಲ್ ಸುಬ್ರಮಣಿ ಭೇಟಿ: ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ, ಮುಟ್ಲು, ಹಮ್ಮಿಯಾಲ, ಕುಂಬಾರಗಡಿಗೆ, ಗರ್ವಾಲೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಭೇಟಿ ನೀಡಿ, ಪರಿಶೀಲನೆ ಮಾಡಿದರು. ಬಳಿಕ ಸಂತ್ರಸ್ತರ ಅಹವಾಲು ಆಲಿಸಿದರು.
ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿರುವ ದಾಸ್ತಾನು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಅಲ್ಲದೆ ಸಂತ್ರಸ್ತರಿಗೆ ಆಹಾರಧಾನ್ಯ ಪೂರೈಕೆಯ ಸಮರ್ಪಕತೆ ಬಗ್ಗೆ ಖಾತರಿ ಪಡಿಸಿದರು.