ಮಡಿಕೇರಿ, ಸೆ. 5: ಪ್ರಕೃತಿ ವಿಕೋಪದಿಂದಾಗಿ ಸಂತ್ರಸ್ತರಾಗಿರುವ ಮಕ್ಕಳಿಗೆ ಶಿಕ್ಷಕರು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಸಲಹೆ ಮಾಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸಂತ ಜೋಸೆಫರ ಶಾಲೆಯಲ್ಲಿ ಬುಧವಾರ ನಡೆದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಕೃತಿ ವಿಕೋಪದಿಂದಾಗಿ ಕೊಡಗು ಜಿಲ್ಲೆ 25 ವರ್ಷಗಳ ಹಿಂದಕ್ಕೆ ಹೋಗಿದೆ. ತೀವ್ರ ಅತಿವೃಷ್ಟಿಯಿಂದಾಗಿ ಮನೆ, ಆಸ್ತಿ ಪಾಸ್ತಿ ಕಳೆದುಕೊಂಡವರಿಗೆ ಆತ್ಮಬಲ ತುಂಬುವ ಕೆಲಸ ಮಾಡಬೇಕಿದೆ. ಜೊತೆಗೆ ಪರಿಹಾರ ಕೇಂದ್ರದಲ್ಲಿರುವ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಶಾಲೆಯಲ್ಲಿ ಮಕ್ಕಳಿಗೆ ಯಾವದೇ ಕೊರತೆ ಉಂಟಾಗದಂತೆ ಶಿಕ್ಷಕರು ನೋಡಿಕೊಳ್ಳಬೇಕು ಎಂದು ಕೆ.ಜಿ.ಬೋಪಯ್ಯ ಅವರು ಸಲಹೆ ಮಾಡಿದರು.
ಜಿ.ಪಂ.ಅಧ್ಯಕ್ಷ ಬಿ.ಎ. ಹರೀಶ್ ಮಾತನಾಡಿ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಾರೆ. ಇದರಿಂದಾಗಿಯೇ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸದಾ ಸ್ಮರಿಸುತ್ತೇವೆ ಎಂದು ಹೇಳಿದರು.
ನಗರಸಭೆ ಅಧ್ಯಕೆÀ್ಷ ಕಾವೇರಮ್ಮ ಸೋಮಣ್ಣ ಮಾತನಾಡಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾತನಾಡಿ ಪ್ರಸಕ್ತ ವರ್ಷದಲ್ಲಿ ಹೆಚ್ಚು ಮಳೆಯಾದ್ದರಿಂದ ಶಾಲೆಗಳಿಗೆ ಹೆಚ್ಚಿನ ರಜೆ ನೀಡಬೇಕಾಯಿತು. ಮಳೆ ರಜೆಯನ್ನು ಸರಿದೂಗಿಸಲು ತರಗತಿಗಳನ್ನು ನಡೆಸಬೇಕು. ಜೊತೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕೊಡಗು ಜಿಲ್ಲೆ ಪ್ರಥಮ ಸ್ಥಾನ ಪಡೆಯುವಂತಾಗಲು ಈಗಿನಿಂದಲೇ ಶ್ರಮಿಸಬೇಕಿದೆ ಎಂದು ಸಲಹೆ ಮಾಡಿದರು.
ಜಿ.ಪಂ.ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ ತೀವ್ರ ಅತಿವೃಷ್ಟಿಯಿಂದಾಗಿ ಶಾಲಾ ಕಟ್ಟಡಗಳು ಹಾನಿಯಾಗಿದ್ದು, ಹಾನಿಯಾಗಿರುವ ಶಾಲೆಗಳ ಪಟ್ಟಿಯನ್ನು ಕೂಡಲೇ ಒದಗಿಸುವಂತೆ ಅವರು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎಸ್.ಚೇತನ್ ಅವರು ‘ನಮ್ಮ ದಿನ, ನಮ್ಮ ಶಾಲೆ, ನಮ್ಮ ಬೇಡಿಕೆ’ ಕುರಿತ ಮನವಿಯನ್ನು ಶಾಸಕರು ಹಾಗೂ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಕೃತಿ ವಿಕೋಪ ಎದುರಿಸಲು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ರಾಜ್ಯದ ಪ್ರಾಥಮಿಕ ಶಾಲಾ ರಾಜ್ಯ ಸಂಘ, 34 ಶೈಕ್ಷÀಣಿಕ ಜಿಲ್ಲೆಗಳ ಸಂಘದವರಿಂದ ಒಂದು ದಿನದ ವೇತನ ನೀಡಲಾಗು ತ್ತಿದೆ ಎಂದು ಅವರು ತಿಳಿಸಿದರು.
ಪ್ರಶಸ್ತಿ ಪಡೆದ ಹಿರಿಯ/ಕಿರಿಯ ಪ್ರಾಥಮಿಕ ಶಾಲಾ ಹಾಗೂ ಪ್ರೌಢ ಶಾಲೆ ಶಿಕ್ಷಕರನ್ನು ಸನ್ಮಾನಿಸಲಾಯಿತು. ಹಾಗೆಯೇ ನಿವೃತ್ತಿ ಹೊಂದಿದ ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆ ವಿತರಿಸಲಾಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ.ರವಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕುಂತಿ ಬೋಪಯ್ಯ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಿ.ಟಿ. ಸೋಮಶೇಖರ, ಅನುದಾನಿತ ಪ್ರೌಢಶಾಲಾ ನೌಕರರ ಸಂಘದ ಅಧ್ಯಕ್ಷರಾದ ಪಿ.ಎ.ಪ್ರಭುಕುಮಾರ್, ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಎಸ್.ಚೇತನ್, ಕೊ.ಜಿ.ಪ್ರಾ.ಶಾ. ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಎನ್.ಕೆ.ಪ್ರಭು, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಪಿ.ಎ.ಪ್ರವೀಣ್, ಮಡಿಕೇರಿ ತಾ. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಎನ್.ಕೆ.ಮೆಹಬೂಬ್ ಸಾಬ್, ಕ.ರಾ.ಪ್ರಾ.ಶಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಪಿ.ಎಸ್. ಜನಾರ್ಧನ, ಅನುದಾನಿತ ಪ್ರೌಢ ಶಾಲಾ ನೌಕರರ ಸಂಘದ ಅಧ್ಯಕ್ಷರಾದ ವಿಲ್‍ಫ್ರೆಡ್ ಕ್ರಾಸ್ತಾ, ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಿಮ್ಮಿ ಸಿಕ್ವೇರಾ, ಸರ್ಕಾರಿ ಪಿಂಚಣಿ ವಂಚಿತರ ನೌಕರರ ಸಂಘದ ಅಧ್ಯಕ್ಷರಾದ ಈ.ಸುರೇಂದ್ರ, ಕ.ರಾ.ಎಸ್.ಸಿ, ಎಸ್.ಟಿ., ಪ್ರಾ.ಮಾ.ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಬಿ.ಸಿ.ರಾಜು ಇತರರು ಇದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವಾಲ್ಟರ್ ಡಿಮೆಲ್ಲೋ ಅವರು ಸ್ವಾಗತಿಸಿದರು, ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯರು ನಾಡಗೀತೆ ಹಾಗೂ ರೈತಗೀತೆ ಹಾಡಿದರು, ಅನಿತಾ ಮತ್ತು ಮಂಜುಳಾ ಅವರು ನಿರೂಪಿಸಿದರು, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್.ಗಾಯತ್ರಿ ವಂದಿಸಿದರು. ಸಭೆ ಆರಂಭದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನ ಹಾಗೂ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಮೃತರಾದವರಿಗೆ ಸಂತಾಪ ಸಲ್ಲಿಸಲಾಯಿತು.