ಸುಂಟಿಕೊಪ್ಪ, ಸೆ. 6: ಕೊಡಗಿನಲ್ಲಿ ಅತಿವೃಷ್ಟಿಯಿಂದ ಮನೆ, ತೋಟ, ಗದ್ದೆ, ಮಣ್ಣು ಪಾಲಾಗಿದ್ದು ಅಕ್ಷರಶ: ಬೀದಿಗೆ ಬಿದ್ದು ಸಂತ್ರಸ್ತರಾಗಿದ್ದಾರೆ. ಮತ್ತೊಂದೆಡೆ ತೋಟ ಕಾರ್ಮಿಕರು, ಮರದ ಕೆಲಸ ನಿರ್ವಹಿಸುವ ಕಾರ್ಮಿಕರು, ಲಾರಿ ಮಾಲೀಕರು ಚಾಲಕರಿಗೆ ಮರ ಸಾಗಾಟ ಸ್ಥಗಿತಗೊಳಿಸಿದ್ದರಿಂದ ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ ಎಂದು ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ತಿಳಿಸಿದ್ದಾರೆ.

ಕೊಡಗಿನಲ್ಲಿ ಪಕೃತಿ ವಿಕೋಪದಿಂದ ಕೃಷಿಕರು ತಾವು ಕೃಷಿ ಜಮೀನಿನಲ್ಲಿ ಬೆಳೆಸಿದ ಕಾಫಿ, ಕರಿಮೆಣಸು, ಸಿಲ್ವರ್ ಮರಗಳು ಧರೆಗುರುಳಿ ಬಿದ್ದು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಕಾಫಿ ತೋಟಗಳಲ್ಲಿ ಗಾಳಿ-ಮಳೆಗೆ ಹಲವು ಸಿಲ್ವರ್ ಸೇರಿದಂತೆ ಇನ್ನಿತರ ಮರಗಳು ಧರೆಗುರುಳಿದೆ ಈ ಮರಗಳು 3 ತಿಂಗಳಿನೊಳಗೆ ಸಾಗಾಟಗೊಳಿಸಬೇಕು ಇಲ್ಲದಿದ್ದಲ್ಲಿ ಮರಕ್ಕೆ ಕೀಟಬಾದೆ ತಗುಲಿ ಮರದ ದಿಂಬಿಗಳು ಯಾವದೇ ಪ್ರಯೋಜನಕ್ಕೆ ಬಾರದಾಗುತ್ತದೆ. ತೋಟದ ಮಾಲೀಕರು ಈಗಾಗಲೇ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಮರಗಳ ಸಾಗಾಟ ನಿಷೇಧದಿಂದ ಇನ್ನಷ್ಟು ಕಂಗಾಲಾಗಲಿದ್ದಾರೆ ಎಂದು ನುಡಿದರು.

ಪುನರ್ವಸತಿ ಕೇಂದ್ರ ನೀಡಲಿ: ಕೊಡಗು ಜಿಲ್ಲಾಡಳಿತ ಮರದ ದಿಂಬಿಗಳನ್ನು ಸಾಗಾಟಗೊಳಿಸುವದನ್ನು ನಿಷೇಧಿಸಿರುವದರಿಂದ ಜಿಲ್ಲೆಯಲ್ಲಿ ಸುಮಾರು 5,000ಕ್ಕೂ ಮಿಕ್ಕಿ ಮರದ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದಾಗಿದೆ. ಲಾರಿ ಮಾಲೀಕರು, ಚಾಲಕರು ಮತ್ತು ಸಹಾಯಕರು ಕೆಲಸವಿಲ್ಲದೆ ಕುಟುಂಬ ನಿರ್ವಹಣೆಗೆ ಸಮಸ್ಯೆ ಎದುರಾಗಿದೆ ಜಿಲ್ಲೆಯ ರಸ್ತೆಗಳಲ್ಲಿ ಇತರ ಸರಕು ಸಾಮಗ್ರಿ ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಾಟಗೊಳಿಸಲು ಅನುಮತಿ ನೀಡಿರುವಂತೆ ಅಷ್ಟೇ ಸಾಂದ್ರತೆ ಹೊಂದಿರುವ ಟಿಂಬರ್ ಸಾಗಾಟಕ್ಕೂ ಜಿಲ್ಲಾಡಳಿತ ಕಾನೂನು ಸಡಿಲಿಸಿ ಅನುಮತಿ ನೀಡಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.