ಸೋಮವಾರಪೇಟೆ, ಸೆ. 5: ತಾಲೂಕಿನ ಗರ್ವಾಲೆ, ಮೂವತ್ತೊಕ್ಲು, ಹಮ್ಮಿಯಾಲ, ಮೇಘತ್ತಾಳು, ಇಗ್ಗೋಡ್ಲು ಸೂರ್ಲಬ್ಬಿ, ಮಂಕ್ಯ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆಯಿಂದ ಸುಮಾರು 5 ರಿಂದ 6 ಸಾವಿರ ಎಕರೆ ಕಾಫಿ ಭೂ ಪ್ರದೇಶಕ್ಕೆ ಹಾನಿಯಾಗಿದ್ದು, ನಷ್ಟಕ್ಕೊಳಗಾದ ಕಾಫಿ ಬೆಳೆಗಾರರ ಹಿತ ಕಾಪಾಡಲು ಕಾಫಿ ಬೆಳೆಗಾರರ ಸಂಘ ಬದ್ಧವಾಗಿದೆ ಎಂದು ಕರ್ನಾಟಕ ರಾಜ್ಯ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಸ್. ಜಯರಾಮ್ ಹೇಳಿದರು.
ಕರ್ನಾಟಕ ರಾಜ್ಯ ಕಾಫಿ ಬೆಳೆಗಾರರ ಸಂಘ ಮತ್ತು ಕೊಡಗು ಕಾಫಿ ಬೆಳೆಗಾರರ ಸಂಘದ ಆಶ್ರಯದಲ್ಲಿ ಮಾದಾಪುರದ ಕೊಡವ ಸಮಾಜದಲ್ಲಿ ನಡೆದ ಕಾಫಿ ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ಕೊಡಿಸಲು ಬೆಳೆಗಾರರ ಸಂಘ ರಾಜ್ಯ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಲಿದ್ದು, ನ್ಯಾಯೋಚಿತ ಪರಿಹಾರ ಕೊಡಿಸುವ ಕೆಲಸ ಮಾಡಲಾಗುವದು ಎಂದರು.
ಹಾನಿಗೊಳಗಾದ ಗ್ರಾಮದಲ್ಲಿ ಎರಡು ಕಾಫಿ ಬೆಳೆಗಾರರ ಸದಸ್ಯರ ತಂಡವನ್ನು ಮಾಡಿ ಗ್ರಾಮದಲ್ಲಿ ಕಾಫಿ ಬೆಳೆಗಾರರ ಸಭೆ ನಡೆಸಿ ನಿರ್ಣಯ ಕೈಗೊಂಡು ಅದನ್ನು ರಾಜ್ಯ ಸಮಿತಿಗೆ ಕಳಿಸಿದ್ದಲ್ಲಿ, ಸರ್ಕಾರದೊಂದಿಗೆ ಸ್ಥಳೀಯವಾಗಿ ಆಗಿರುವ ನಷ್ಟದ ಬಗ್ಗೆ ಚರ್ಚಿಸಲು ಅನುಕೂಲವಾಗಲಿದ್ದು, ಎಲ್ಲ ಗ್ರಾಮಗಳಲ್ಲೂ ಸಭೆ ನಡೆಸಿ ನಿರ್ಣಯ ಕೈಗೊಳ್ಳುವಂತೆ ಸಲಹೆ ನೀಡಿದರು.
ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ವಯ ರೈತರಿಂದ ಭೂಮಿ ಖರೀದಿಸಲು ಮುಂದಾದಲ್ಲಿ, ಸ್ಥಳ ತೆರವುಗೊಳಿಸಿ ಹೊರಗೆ ಹೋಗಲು ಕೇವಲ ಶೇ. 10ರಷ್ಟು ಜನರು ಮಾತ್ರ ಸಿದ್ದರಿದ್ದು, ಗರ್ವಾಲೆ ಮತ್ತು ಮೂವತ್ತೊಕ್ಲು ಗ್ರಾಮ ಸೇರಿದಂತೆ ಹಲವು ಗ್ರಾಮದ ಬೆಳೆಗಾರರು ಗ್ರಾಮವನ್ನು ತೊರೆಯಲು ಒಪ್ಪುವದಿಲ್ಲ. ಈ ಭಾಗದ ಹಲವು ರೈತರು ತಮ್ಮ ಹೆಸರಿನಲ್ಲಿ ಭೂ ದಾಖಲೆ ಪಡೆದಿಲ್ಲ. ಜಮ್ಮಾ ಹೆಸರಿನಲ್ಲಿ ಭೂಮಿ ಇರುವದರಿಂದ ಸರ್ಕಾರದ ಸವಲತ್ತು ಪಡೆಯಲು ಕಷ್ಟವಾಗುತ್ತದೆ. ಮನೆ ಮತ್ತು ಕಾಫಿ ತೋಟಕ್ಕೆ ಹಾನಿಯಾದವರಿಗೆ ರೂ. 5 ಲಕ್ಷ ಪರಿಹಾರ ನೀಡಲಿ. ಪೂರ್ಣ ಮನೆ ಮತ್ತು ತೋಟ ಕಳೆದುಕೊಂಡವರಿಗೆ ಬೇರೆಡೆ ಸೂಕ್ತ ಸ್ಥಳ ನೀಡುವಂತೆ ಸಭೆಯಲ್ಲಿದ್ದ ಬೆಳೆಗಾರರು ತಮ್ಮ ಅಭಿಪ್ರಾಯ ಮಂಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಮಾದಾಪುರ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಕಾಫಿ ಬೆಳೆಗಾರರು ಆದ ಮನು ಮೇದಪ್ಪ ವಹಿಸಿದ್ದರು. ವೇದಿಕೆಯಲ್ಲಿ ಕೆ.ಜಿ.ಎಫ್.ನ ರಾಜ್ಯ ಸಮಿತಿ ಉಪಾಧ್ಯಕ್ಷ ನಂದಾ ಬೆಳ್ಳಿಯಪ್ಪ, ಕಾರ್ಯದರ್ಶಿ ತೀರ್ಥ ಮಲ್ಲೇಶ್, ಕೊಡಗು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ದಿನೇಶ್, ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ, ಕಾರ್ಯದರ್ಶಿ ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.