ಕುಶಾಲನಗರ, ಸೆ. 6: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಡಾ. ಜಯಮಾಲಾ ಕುಶಾಲನಗರದಲ್ಲಿರುವ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಸ್ಥಳೀಯ ವಾಲ್ಮೀಕಿ ಭವನದಲ್ಲಿ ಆಶ್ರಯ ಪಡೆದಿರುವ ನೆರೆ ಸಂತ್ರಸ್ತರೊಂದಿಗೆ ಯೋಗಕ್ಷೇಮ ವಿಚಾರಿಸಿದ ಸಚಿವರು ಮಹಿಳೆಯರು ಮತ್ತು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಶ್ರಯ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಯುವತಿಯರು, ಮಕ್ಕಳಿದ್ದು ಯಾವದೇ ರೀತಿಯಲ್ಲಿ ಅನಾನುಕೂಲ, ಅವ್ಯವಸ್ಥೆ ಎದುರಾಗದಂತೆ ವಿಶೇಷ ಕಾಳಜಿ ವಹಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಶಿಬಿರದಲ್ಲಿದ್ದ ಪುಟ್ಟ ಮಕ್ಕಳು, ವೃದ್ಧರಿಗೆ ಕಲ್ಪಿಸಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದ ಸಚಿವರು, ಮಕ್ಕಳಿಗೆ ಚಾಕಲೇಟ್, ಪುಸ್ತಕಗಳನ್ನು ವಿತರಣೆ ಮಾಡಿದರು.
ಈ ಸಂದರ್ಭ ಕೇಂದ್ರದ ಉಸ್ತುವಾರಿ ಅಧಿಕಾರಿಗಳಾದ ಬಿನಾಯ್, ಕೇಂದ್ರದ ನೋಡಲ್ ಅಧಿಕಾರಿ ಫಿಲಿಪ್‍ವಾಸ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮಲ್ಲೇಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಧಿಕಾರಿ ಎಂ.ಎನ್. ಮಂಜುನಾಥ್ ಮತ್ತಿತರರು ಇದ್ದರು.