.

ಮಡಿಕೇರಿ, ಸೆ. 6: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ವಿದ್ಯಾರ್ಥಿಗಳ ಸಂಕಷ್ಟಗಳಿಗೆ ಸ್ಪಂದಿಸಲು ಮಂಗಳೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ. ಜಿಲ್ಲೆಯಲ್ಲಿ ಹಲವು ವಿದ್ಯಾರ್ಥಿಗಳು ತಮ್ಮ ಮನೆ, ಸಾಮಗ್ರಿಗಳು ಹಾಗೂ ದಾಖಲೆಗಳನ್ನು ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಜಿಲ್ಲೆಯ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯ ನಿರಂತರ ಸಂಪರ್ಕದಲ್ಲಿದ್ದು, ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕುತ್ತಿದೆ.

ಈಗಾಗಲೇ ಮನೆ ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯದ ವ್ಯವಸ್ಥೆ ಮಾಡಿಕೊಡ ಲಾಗಿದೆ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯವು ಸಂತ್ರಸ್ತ ವಿದ್ಯಾರ್ಥಿಗಳಿಗೆ ಇನ್ನೂ ಹಲವು ರೀತಿಯಲ್ಲಿ ನೆರವಿನ ಹಸ್ತ ನೀಡಲಿದೆ. ಈ ಕುರಿತಂತೆ ವಿಶ್ವವಿದ್ಯಾಲಯವು ಆ ಭಾಗದ ಪ್ರಾಂಶುಪಾಲರುಗಳೊಂದಿಗೆ ಚರ್ಚಿಸಲು ಸದ್ಯದಲ್ಲೇ ಸಭೆ ಕರೆಯಲು ನಿರ್ಧರಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ವಿವಿಧ ಕಾಲೇಜುಗಳಿಂದ ಜಿಲ್ಲೆಯ ಸಂತ್ರಸ್ತ ವಿದ್ಯಾರ್ಥಿಗಳಿಗೆ ಹಣ ಸಂಗ್ರಹಿಸಿ ನೀಡಲಾಗುತ್ತಿದೆ. ನೆರೆಯಿಂದಾಗಿ ತರಗತಿಗೆ ಹಾಜರಾಗಲು ಅಸಾಧ್ಯವಾದ ವಿದ್ಯಾರ್ಥಿಗಳಿಗೆ ಹಾಜರಾತಿ ನೀಡಲಾಗುವದು. ವಿಶ್ವವಿದ್ಯಾನಿಲಯ ನೀಡಿರುವ ದಾಖಲೆಗಳನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುವದು. ಕಾಲಮಿತಿಗೆ ಸರಿಯಾಗಿ ಪಾಠ-ಪಠ್ಯಗಳು ಮುಗಿಯದಿದ್ದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆಯನ್ನು ನಡೆಸಲಾ ಗುವದು. ಪರೀಕ್ಷಾ ಶುಲ್ಕ ಹಾಗೂ ಇನ್ನಿತರ ಶುಲ್ಕದಿಂದ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಲಾಗುವದು. ಕೊಡಗು ಜಿಲ್ಲೆಯಲ್ಲಿ ಎನ್.ಎಸ್.ಎಸ್. ಕ್ಯಾಂಪ್ ಕೂಡ ನಡೆಸಲಾಗುತ್ತದೆ. ಎನ್.ಎಸ್.ಎಸ್. ಮೂಲಕ ಸಮಾಲೋಚನೆ ನಡೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮನೆ ಕಳೆದುಕೊಂಡಿರುವ ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯ ಯಾವದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ವಸತಿ ವ್ಯವಸ್ಥೆ ಸಹಿತ ಪ್ರವೇಶಾತಿ ನೀಡಲಾಗುವದು. ಎಂ.ಎಸ್.ಡಬ್ಲ್ಯೂ ಕೋರ್ಸ್‍ನ ವಿದ್ಯಾರ್ಥಿಗಳಿಂದ ಕ್ಷೇತ್ರ ಕಾರ್ಯ ನಡೆಸಿ ಸಂತ್ರಸ್ತರ ಅಸ್ತವ್ಯಸ್ತವಾದ ಜೀವನವನ್ನು ಹೇಗೆ ಸುಧಾರಿಸ ಬಹುದೆಂಬದರ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಬಾರ ಕುಲಪತಿ ಡಾ. ಸಿ.ಕೆ. ಕಿಶೋರ್ ಕುಮಾರ್ ತಿಳಿಸಿದ್ದಾರೆ.