ಭಾಗಮಂಡಲ, ಸೆ. 5 : 11 ದಿನಗಳ ಕಾಲ ನಿರಾಶ್ರಿತರಿಗೆ ಆಹಾರ, ವಸತಿ ಸೌಲಭ್ಯಗಳನ್ನು ಒದಗಿಸಿ ಮಾನವೀಯತೆ ಮೆರೆದ ಚೇರಂಬಾಣೆಯ ಅರುಣಾ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಆಗಸ್ಟ್ 16ರಂದು ರಾತ್ರಿ ಮದೆನಾಡು, ಜೋಡುಪಾಲ, ಹಾಗೂ 2ನೇ ಮೊಣ್ಣಂಗೇರಿಯ ಗ್ರಾಮಸ್ಥರು ಭೂ ಕುಸಿತದ ಭೀತಿಯಿಂದ ಮನೆ-ಮಠ ಗಳನ್ನು ತೊರೆದು ಚೇರಂಬಾಣೆಗೆ ಆಗಮಿಸಿದ್ದರು. ಜಿಲಾ ್ಲಪಂಚಾಯಿತಿ ಅಧ್ಯಕ್ಷ ಬಿ. ಎ. ಹರೀಶ್ ಅವರ ಸೂಚನೆ ಮೇರೆಗೆ ಮದೆನಾಡಿನಿಂದ ಜೀಪುಗಳಲ್ಲಿ ನಿರಾಶ್ರಿತರನ್ನು ಚೇರಂಬಾಣೆಯ ಅರುಣಾ ಪದವಿಪೂರ್ವ ಕಾಲೇಜಿಗೆ ಕರೆ ತರಲಾಯಿತು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪೊಡೊನೋಳಂಡ ಎಸ್. ಸುಬ್ಬಯ್ಯ ಮತ್ತು ಆಡಳಿತ ಮಂಡಳಿ ಸದಸ್ಯರು ಪರಿಹಾರ ಕೇಂದ್ರಕ್ಕೆ ಆಗಮಿಸಿದ 340 ನಿರಾಶ್ರಿತರಿಗೆ ನಡುರಾತ್ರಿ ವ್ಯವಸ್ಥೆ ಕಲ್ಪಿಸಿದರು. ಚೇರಂಬಾಣೆಯ ನಾಗರಿಕರು ನೆರವಿನ ಹಸ್ತ ಚಾಚಿದರು. ಆಗಸ್ಟ್ 17ಕ್ಕೆ ನಿರಾಶ್ರಿತರ ಸಂಖ್ಯೆ 700 ಕ್ಕೆ ಏರಿತು. ಅಂದಿನಿಂದ 11 ದಿನಗಳ ಕಾಲ ನಿರಾಶ್ರಿತರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಿದ್ದು ಸ್ಮರಣಾರ್ಹ.

ಚೇರಂಬಾಣೆಯ ಬೇಂಗುನಾಡು ಕೊಡವ ಸಮಾಜದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಸಾಮಗ್ರಿಗಳನ್ನು ಸಂತ್ರಸ್ತರಿಗೆ ವಿತರಿಸಿ ನಿರಾಶ್ರಿತರಿಗೆ ಯಾವದೇ ರೀತಿ ಅನಾನುಕೂಲ ವಾಗದಂತೆ ನೋಡಿ ಕೊಂಡ ಪೊಡನೋಳಂಡ ಸುಬ್ಬಯ್ಯ ಅವರ ಸೇವೆ ನಾಗರಿಕ ಸಮಾಜಕ್ಕೆ ಮಾದರಿ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.