ಗೋಣಿಕೊಪ್ಪಲು, ಸೆ. 6: ಗೋಣಿಕೊಪ್ಪಲು ಪ್ರೌಢಶಾಲೆಯ ಟೈಗರ್ ಪಗ್ ಪರಿಸರ ಸಂಘದ ವತಿಯಿಂದ ಸ್ವಚ್ಛತಾ ಪಕ್ವಾಡ(ಸ್ವಚ್ಛತಾ ಪಾಕ್ಷಿಕ)ದ ಅಂಗವಾಗಿ ಸ್ವಚ್ಛತಾ ಜಾಗೃತಿ ದಿನವನ್ನು ಆಚರಿಸಲಾಯಿತು.
ಸಂಘದ ವಿದ್ಯಾರ್ಥಿಗಳು ಶಾಲೆಯಲ್ಲಿ ಸ್ವಚ್ಛ ಮಾಡಬೇಕಾದ ತರಗತಿಗಳು, ಆಡಿಟೋರಿಯಂ, ವಿಜ್ಞಾನ ಪ್ರಯೋಗಾಲಯ, ಉದ್ಯಾನವನ ಮುಂತಾದ ಸ್ಥಳಗಳನ್ನು ವೀಕ್ಷಿಸಿ ಪಟ್ಟಿಮಾಡಿದರು. ತದ ನಂತರ 30 ನಿಮಿಷಗಳ ಕಾಲ ಶ್ರಮದಾನ ಮಾಡಿ ಕಳೆ ಗಿಡಗಳನ್ನು ಕಿತ್ತು ಹಾಕಿದರು. ಪ್ರಯೋಗಶಾಲೆ, ಕೆಲವು ತರಗತಿಗಳ ಕಿಟಕಿ, ಗಾಜಿನ ಹಲಗೆ, ಕಂಬಿಗಳು, ಗೋಡೆಯ ಮೇಲಿದ್ದ ದೂಳು ತೆಗೆದು ಸ್ವಚ್ಛಗೊಳಿಸಿದರು. ಉಳಿದ ತರಗತಿಗಳು, ರಸ್ತೆಯ ಇಕ್ಕೆಲಗಳು, ಉದ್ಯಾನವನಗಳನ್ನು ಸ್ವಚ್ಛಗೊಳಿಸಿದರು. ಮುರಿದ ಪೀಠೋಪಕರಣ ತೆಗೆದು ಹಾಕಿದರು. ಶಾಲೆಯ ಮುಖ್ಯ ಶಿಕ್ಷಕ ರತೀಶ್ ರೈ, ವಿಜ್ಞಾನ ಶಿಕ್ಷಕರು ಹಾಗೂ ಪರಿಸರ ಸಂಘದ ಸಂಚಾಲಕರು ಆದ ಡಿ. ಕೃಷ್ಣ ಚೈತನ್ಯ, ಇತರ ಶಿಕ್ಷಕರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.