ಸೋಮವಾರಪೇಟೆ, ಸೆ. 6: ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಟ್ಟಿಹೊಳೆ ಗ್ರಾಮದ ನಿರ್ಮಲ ವಿದ್ಯಾಭವನ ಶಾಲೆಯನ್ನು ಸೂಕ್ತ ರಸ್ತೆ ಸಂಪರ್ಕದ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಸುಂಟಿಕೊಪ್ಪದ ಸೆಂಟ್ ಮೇರಿಸ್ ಶಾಲೆಗೆ ಸ್ಥಳಾಂತರಗೊಳಿಸಲಾಗಿದೆ ಎಂದು ಶಾಲಾ ಉಸ್ತುವಾರಿ ಹಾಗೂ ಸೆಂಟ್ ಮೇರಿಸ್ ಚರ್ಚ್‍ನ ಧರ್ಮಗುರು ಸಲ್ಡಾನ ತಿಳಿಸಿದ್ದಾರೆ. ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಹಟ್ಟಿಹೊಳೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಮುಚ್ಚಿಹೋಗಿದ್ದವು. ಈ ಸಂದರ್ಭ ನಿರ್ಮಲ ವಿದ್ಯಾಭವನ ಶಾಲೆಯು ಆರಂಭಗೊಳ್ಳದೆ 535 ವಿದ್ಯಾರ್ಥಿಗಳ ಸ್ಥಿತಿ ಅಯೋಮಯವಾಗಿತ್ತು. ಈ ಹಿನ್ನೆಲೆಯಲ್ಲಿ ಆ.30ರಂದು ಪೋಷಕರ ಸಭೆಯನ್ನು ನಡೆಸಿ ಸುಂಟಿಕೊಪ್ಪದ ಸೆಂಟ್ ಮೇರಿಸ್ ಶಾಲೆಗೆ ವಿದ್ಯಾರ್ಥಿಗಳನ್ನು ಸ್ಥಳಾಂತರಗೊಳಿಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು.
ಶಾಲೆಗೆ ಆಗಮಿಸಲು ಹಟ್ಟಿಹೊಳೆ-ಮಾದಾಪುರ, ಮಡಿಕೇರಿ-ಕಾಂಡನಕೊಲ್ಲಿ, ಮಾದಾಪುರ-ಗರ್ವಾಲೆ ರಸ್ತೆಗಳು ಸಂಪೂರ್ಣ ಹಾಳಾಗಿರುವದರಿಂದ ರಸ್ತೆ ವ್ಯವಸ್ಥೆ ಸಮರ್ಪಕವಾಗಿ ಆಗುವವರೆಗೂ ಸುಂಟಿಕೊಪ್ಪ ಶಾಲೆಗೆ ವರ್ಗಾಯಿಸಲಾಗಿದ್ದು, ಅಲ್ಲಿ 12 ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಎಲ್‍ಕೆಜಿಯಿಂದ ಹತ್ತನೇ ತರಗತಿಗಳ ಪಾಠ ಪ್ರವಚನಗಳು ಎಂದಿನಂತೆ ನಡೆಯುತ್ತದೆ. ಅಲ್ಲದೇ ರಸ್ತೆ ಸಂಚಾರ ಅನುಕೂಲವಿರುವ ಕಡೆಗಳಲ್ಲಿ ಶಾಲೆಯ ವಾಹನಗಳು ತೆರಳಲಿವೆ ಎಂದು ಫಾ.ಸಲ್ಡಾನ ತಿಳಿಸಿದ್ದಾರೆ.
ಶಾಲೆಯ ಪೋಷಕರು, ಗ್ರಾಮಸ್ಥರು, ಮಾದಾಪುರ ವಾಹನ ಚಾಲಕರ ಸಂಘದ ಅಧ್ಯಕ್ಷ ಹನೀಫ್ ಮತ್ತು ಪದಾಧಿಕಾರಿಗಳು, ಗ್ರಾಮಸ್ಥರಾದ ಅಜೀಜ್, ಹಾಡಗೇರಿಯ ನಂದ, ಮೂವತ್ತೊಕ್ಲು ಗ್ರಾಮದ ಪ್ರತ್ತು, ಮಾದಾಪುರದ ಸಂತೋಷ್ ಹಾಗೂ ಅವರ ತೋಟದ ಕಾರ್ಮಿಕರು, ಐವಾನ್, ಹಟ್ಟಿಹೊಳೆಯ ಗ್ರಾಮಸ್ಥರು, ಶಿಕ್ಷಕರು ತಮ್ಮ ಸ್ವಂತ ವಾಹನಗಳಲ್ಲಿ ಶಾಲೆಯ ಪಿಠೋಪಕರಣಗಳು, ಕಂಪ್ಯೂಟರ್ ಸೇರಿದಂತೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ಸುಂಟಿಕೊಪ್ಪಕ್ಕೆ ಸಾಗಿಸಲು ಸಹಕರಿಸಿದ್ದಾರೆ ಎಂದು ಮಾದಾಪುರ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಪೋಷಕ ಎಂ.ಎ. ಮಜೀದ್ ಮಾಹಿತಿಯಿತ್ತರು.