ಮಡಿಕೇರಿ, ಸೆ.6: ಚೇರಂಬಾಣೆ ಪರಿಹಾರ ಕೇಂದ್ರದಲ್ಲಿದ್ದ ಸರ್ವ ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ ಕಾರಣಕ್ಕಾಗಿ ನನ್ನ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಉದ್ದೇಶದಿಂದ ಹುರುಳಿಲ್ಲದ ಆರೋಪಗಳನ್ನು ಮಾಡಲಾಗಿದೆ. ನನ್ನಿಂದ ಯಾವುದೇ ತಪ್ಪುಗಳು ನಡೆದಿದ್ದರೂ ನನ್ನ ವಿರುದ್ಧ ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಚೇರಂಬಾಣೆ ಕೊಡವ ಸಮಾಜ ದೂರು ನೀಡಲಿ ಎಂದು ಜಿ.ಪಂ ಮಾಜಿ ಸದಸ್ಯೆ ಬಬ್ಬೀರ ಸರಸ್ವತಿ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೈಜ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳು ಹಂಚಿಕೆಯಾಗದೆ ಪರರ ಪಾಲಾಗುತ್ತಿದ್ದುದ್ದನ್ನು ಗಮನಿಸಿ ಪ್ರಶ್ನೆ ಮಾಡಿದ್ದೇ ನನ್ನನ್ನು ಕೊಡವ ವಿರೋಧಿ ಎಂದು ಪ್ರತಿಬಿಂಬಿಸಿ ತೇಜೋವಧೆ ಮಾಡಲು ಕಾರಣವೆಂದು ಅಸಮಾಧಾನ ವ್ಯಕ್ತಪಡಿಸಿದರು. ಕೇವಲ ಶೇ.5 ರಷ್ಟು ಮಂದಿಯ ವಿರುದ್ಧ ಮಾತ್ರ ನಾನು ಮಾತನಾಡಿದ್ದೇನೆ ಹೊರತು ಇಡೀ ಸಮಾಜದ ವಿರುದ್ದ ಹೇಳಿಕೆ ನೀಡಿಲ್ಲವೆಂದು ಸ್ಪಷ್ಟಪಡಿಸಿದರು.
ಪರಿಹಾರ ಕೇಂದ್ರ ಆರಂಭವಾದ ನಂತರ ಸ್ಥಳೀಯರು ಸೇರಿ 32 ಗ್ರಾಮಸ್ಥರ ಸಮಿತಿಯೊಂದನ್ನು ರಚಿಸಿದರು. ಈ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ ನಾನು ದಾನಿಗಳು ನೀಡಿದ ಹಣವನ್ನು ಕಾನೂನು ಬದ್ಧವಾಗಿ ಸಂಗ್ರಹಿಸಿದ್ದು, ಕಂದಾಯ ಅಧಿಕಾರಿಗಳ ಸಮ್ಮುಖದಲ್ಲೇ ಈ ಪ್ರಕ್ರಿಯೆ ನಡೆದಿದೆ. ಹಣ ಸಂಗ್ರಹಿಸಬಾರದೆಂದು ಜಿಲ್ಲಾಡಳಿತ ಸಾರ್ವಜನಿಕ ಪ್ರಕಟಣೆ ಹೊರಡಿಸಿದ ನಂತರ ಎಲ್ಲೂ ಹಣ ಸಂಗ್ರಹಿಸಿಲ್ಲವೆಂದು ಬಬ್ಬೀರ ಸರಸ್ವತಿ ಸ್ಪಷ್ಟಪಡಿಸಿದರು.
ರೈತ ಸಂಘದ ಪ್ರತಿನಿಧಿಗಳು ತಲುಪಿಸಿದ ಅಕ್ಕಿಯನ್ನು ಗ್ರಾಮಸ್ಥರ ಬೇಡಿಕೆಯಂತೆ ಪಿಡಿಒ ಅವರ ಸಹಕಾರ ಪಡೆದು ಹಂಚಿಕೆ ಮಾಡಲು ಸಲಹೆ ನೀಡಿದ್ದೆ. ಆದರೆ ಇದು ಸಾರ್ವಜನಿಕರು ನೀಡಿದ ಪರಿಹಾರ, ಅಧಿಕಾರಿಗಳ ಮಧ್ಯಸ್ಥಿಕೆ ಯಾಕೆ ಎಂದು ಕೊಡವ ಸಮಾಜದ ಪ್ರತಿನಿಧಿಗಳು ನನ್ನ ವಿರುದ್ಧ ಹರಿಹಾಯ್ದಿದ್ದಾರೆ. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದ ವಿಡಿಯೋ ದೃಶ್ಯಾವಳಿಯ ಸಾಕ್ಷಿ ಇರುವದಾಗಿ ಸರಸ್ವತಿ ಮಾಹಿತಿ ನೀಡಿದರು.
ಸಂಕಷ್ಟದಲ್ಲಿದ್ದ ಸಂತ್ರಸ್ತರಿಗಾಗಿ ಚೇರಂಬಾಣೆ ಹಾಗೂ ಎಮ್ಮೆಮಾಡು ಮುಸಲ್ಮಾನ ಯುವಕರು ಮಾಡಿದ ಸೇವೆ ಶ್ಲಾಘನೀಯವೆಂದು ಅವರು ಇದೇ ಸಂದರ್ಭ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವದಾಗಿ ತಿಳಿಸಿದ ಸರಸ್ವತಿ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಸಂತ್ರಸ್ತ ಎರಡನೇ ಮೊಣ್ಣಂಗೇರಿಯ ಸತೀಶ್ ಮಾತನಾಡಿ ಚೇರಂಬಾಣೆ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರನ್ನು ಉತ್ತಮ ರೀತಿಯಲ್ಲೇ ನೋಡಿಕೊಳ್ಳಲಾಗಿದೆ. ಆದರೆ ರಾಶಿಗಟ್ಟಲೆ ಬಂದ ಸಾಮಗ್ರಿಗಳು ನೈಜ ಸಂತ್ರಸ್ತರ ಪಾಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅದೇ ಗ್ರಾಮದ ಸಂತ್ರಸ್ತ ದಿನೇಶ್ ಮಾತನಾಡಿ ಎರಡನೇ ಮೊಣ್ಣಂಗೇರಿಯಲ್ಲಿ ಧಾರಾಕಾರ ಮಳೆಗೆ ನೀರುಪಾಲಾಗುತ್ತಿದ್ದ ನಮ್ಮನ್ನು ಚೇರಂಬಾಣೆಯ ಯುವಕರು ಜಾತಿ, ಮತ ನೋಡದೆ ರಕ್ಷಿಸಿದರು. ಮನೆ ಮನೆಗಳಿಂದ ಆಹಾರ, ಬಟ್ಟೆ ನೀಡಿ ಸಂತೈಸಿದರು. ಆದರೆ ನಂತರದ ದಿನಗಳಲ್ಲಿ ನಮಗಾಗಿ ಬಂದ ಪ್ರತಿಷ್ಠಿತ ಸಂಸ್ಥೆಗಳ ಸಾಮಗ್ರಿಗಳೆಲ್ಲವೂ ಪರರ ಪಾಲಾಗಿದೆ ಎಂದರು.
ಮದೆ ಗ್ರಾಮದ ಹೆಚ್.ಡಿ.ದಿಲೀಪ್ ಮಾತನಾಡಿ ನಮಗೆ ಹಳೆಯ ಬಟ್ಟೆಗಳನ್ನಷ್ಟೇ ನೀಡಲಾಗಿದೆ, ದಾನಿಗಳು ನೀಡಿದ ಸಾಮಗ್ರಿಗಳನ್ನು ಮಾರ್ಕೆಟ್‍ನಲ್ಲಿಟ್ಟಂತೆ ಜೋಡಿಸಿಡಲಾಗಿತ್ತು. ಆದರೆ ಇವುಗಳು ಎಲ್ಲಿಗೆ ಹೋದವು ಎನ್ನುವ ಬಗ್ಗೆ ಮಾಹಿತಿಯೇ ಇಲ್ಲವೆಂದು ಆರೋಪಿಸಿದರು. ಸುದ್ದಿಗೋಷ್ಠಿ ಯಲ್ಲಿ ಸಂತ್ರಸ್ತರಾದ ಸೀನಾ ಹಾಗೂ ಸುಂದರ ಉಪಸ್ಥಿತರಿದ್ದರು.