ಕೂಡಿಗೆ, ಸೆ. 7 : ಕ್ರೀಡೆಯು ಶಾಂತಿ ಮತ್ತು ಸಹಬಾಳ್ವೆಯ ಸಂಕೇತವಾಗಿದ್ದು, ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುವ ಮೂಲಕ ಮಾನಸಿಕ ಮತ್ತು ದೈಹಿಕ ಶಕ್ತಿ ವೃದ್ಧಿಸಿಕೊಳ್ಳಬಹುದು ಎಂದು ಸೋಮವಾರಪೇಟೆ ತಾಲೂಕು ಕ್ರೀಡಾ ಅಧೀಕ್ಷಕ ವೆಂಕಟೇಶ್ ಹೇಳಿದರು.

ಕೂಡಿಗೆಯ ಆಂಜೆಲಾ ವಿದ್ಯಾನಿಕೇತನ ಶಾಲೆಯ ಮೈದಾನದಲ್ಲಿ ನಡೆದ ಪ್ರಾಥಮಿಕ ಶಾಲಾ ಕೂಡಿಗೆ ಎ ವಲಯದ ಕ್ರೀಡಾಕೂಟ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಒಂದು ಅಂಶವಾಗಿದೆ. ತಮ್ಮಲ್ಲಿನ ಪ್ರತಿಭೆಯನ್ನು ಹೊರಹಾಕಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಪಠ್ಯದ ಜೊತೆಯಲ್ಲಿ ಕ್ರೀಡೆಗಳಲ್ಲಿಯೂ ಪಾಲ್ಗೊಳ್ಳಬೇಕು ಎಂದರು. ಕ್ರೀಡಾಕೂಟಕ್ಕೆ ಸೋಮವಾರಪೇಟೆ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಅವರು ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಮುಖ್ಯಸ್ಥೆ ರೋಹಿಣಿ ಫರ್ನಾಂಡಿಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ವಿಜಯ್, ದೈಹಿಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಕರುಂಬಯ್ಯ, ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕ ಕೆ.ಕೆ.ನಾಗರಾಜಶೆಟ್ಟಿ, ಪೋಷಕ ಪರಿಷತ್ತಿನ ಅಧ್ಯಕ್ಷ ಜಗದೀಶ್ ಹಾಗೂ ಪೋಷಕ ಪರಿಷತ್ತಿನ ನಿರ್ದೇಶಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರು ಇದ್ದರು.

ಕ್ರೀಡಾಕೂಟದಲ್ಲಿ ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 22 ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.