ಗೋಣಿಕೊಪ್ಪ, ಸೆ. 7: ಗೋಣಿಕೊಪ್ಪ ದಸರಾ ಆಚರಣೆಗೆ ಸರ್ಕಾರದಿಂದ ನೀಡಲು ಉದ್ದೇಶಿಸಿರುವ 30 ಲಕ್ಷ ಅನುದಾನದಲ್ಲಿ 20 ಲಕ್ಷ ಹಣವನ್ನು ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲು ಮುಂದಾಗುವದು ಒಳಿತು ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿ ನಾಯ್ಡು ಮನವಿ ಮಡಿಕೊಂಡಿದ್ದಾರೆ.
ನೆರೆಯಲ್ಲಿ ಪ್ರಾಣ ಉಳಿಸಿಕೊಂಡಿರುವ ಸಂತ್ರಸ್ತರಿಗೆ ನಾವು ನೆರವಾಗುವದು ಅವರ ಬದುಕಿಗೆ ನೆರವಾದಂತಾಗಲಿದೆ. ರೂ. 10 ಲಕ್ಷ ಹಣವನ್ನು ಸಾಂಪ್ರದಾಯಿಕ ದಸರಾ ಆಚರಣೆಗೆ ಪೂಜಾ ವಿಧಿವಿಧಾನಕ್ಕೆ ಬಳಸಿಕೊಳ್ಳುವದು ಉತ್ತಮ. ಉಳಿದ ಹಣವನ್ನು 4 ಸಂತ್ರಸ್ತ ಕುಟುಂಬಗಳಿಗೆ ತಲಾ 5 ಲಕ್ಷದಂತೆ ಮನೆ ಕಟ್ಟಿಕೊಡುವದರಿಂದ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿದಂತಾಗುತ್ತದೆ. ಜಿಲ್ಲೆಯಲ್ಲಿ ನಡೆಯಬಾರದಂತ ದುರಂತ ನಡೆದಿರುವದರಿಂದ ನಾವು ಮಾನವೀಯತೆಯಿಂದ ಸ್ಪಂದಿಸಬೇಕಾಗಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆಯಬೇಕಿದೆ. ದೃಢ ನಿರ್ಧಾರವನ್ನು ಸಂಬಂಧಿಸಿದವರು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿಕೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.